‘ಬಿಗ್ ಬಾಸ್ ಕನ್ನಡ ಸೀಸನ್ 12’ ಅಪ್ರತೀಕ್ಷಿತವಾಗಿ ಸ್ಥಗಿತಗೊಂಡಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸೂಕ್ತ ಅನುಮತಿ ದೊರಕದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯ ಆಡಳಿತಾಧಿಕಾರಿಗಳು ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಹಾಕಿದ್ದಾರೆ. ಇದರಿಂದಾಗಿ ಕೆಲವೇ ದಿನಗಳ ಹಿಂದೆ ಪ್ರಾರಂಭವಾದ ಈ ಸೀಸನ್ ಈಗ ತಾತ್ಕಾಲಿಕವಾಗಿ ನಿಂತು ಹೋಗಿದೆ.

ಬಿಗ್ ಬಾಸ್ ಮನೆಯಲ್ಲಿ ಇದ್ದ ಕಾಕ್ರೋಚ್ ಸುಧಿ, ಮಲ್ಲಮ್ಮ, ಅಶ್ವಿನಿ ಗೌಡ, ಮಾಳು ನಿಪನಾಳ, ಗಿಲ್ಲಿ ನಟ, ಕಾವ್ಯ ಶೈವ, ಮಂಜು ಭಾಷಿಣಿ, ಅಭಿಷೇಕ್, ಸತೀಶ್, ಚಂದ್ರಪ್ರಭ, ರಕ್ಷಿತಾ ಶೆಟ್ಟಿ, ರಾಶಿಕಾ, ಧ್ರುವಂತ್ ಸೇರಿದಂತೆ ಎಲ್ಲ ಸ್ಪರ್ಧಿಗಳನ್ನು ಮನೆಯಿಂದ ಖಾಲಿ ಮಾಡಿಸಿ ರಾಮನಗರ ತಾಲೂಕಿನ ಬಿಡಿದಿಯಲ್ಲಿರುವ ಈಗಲ್ಟನ್ ರೆಸಾರ್ಟ್‌ಗೆ ಕಳುಹಿಸಲಾಗಿದೆ. ಅಲ್ಲಿ 12 ರೂಮ್‌ಗಳನ್ನು ಬುಕ್ ಮಾಡಲಾಗಿದ್ದು, ಕಾನೂನು ತೊಡಕು ನಿವಾರಣೆಯಾಗುವವರೆಗೂ ಅವರನ್ನು ಅಲ್ಲಿ ಇರಿಸಲಾಗುವುದು.

ಇದೇ ರೀತಿಯ ಘಟನೆ 2021ರಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 8’ ವೇಳೆಯಲ್ಲಿಯೂ ನಡೆದಿತ್ತು. ಆ ವೇಳೆ ಕೊರೊನಾ ಲಾಕ್‌ಡೌನ್ ಕಾರಣದಿಂದ ಶೋ ಮಧ್ಯದಲ್ಲೇ ನಿಂತಿತ್ತು. ನಂತರ ಪರಿಸ್ಥಿತಿ ಸಹಜವಾದ ಬಳಿಕ ಶೋ ಮರುಪ್ರಾರಂಭಗೊಂಡಿತ್ತು. ಇದೇ ರೀತಿಯಾಗಿ ಈಗಲೂ ಶೋ ಪುನಃ ಆರಂಭವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಶೋ ಆಯೋಜಕರು ಈ ಬಾರಿ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ. ನ್ಯಾಯಾಲಯದಿಂದ ನಿರ್ಣಯ ಬರುವವರೆಗೂ ಬಿಗ್ ಬಾಸ್ ಮನೆ ಶಾಂತವಾಗಿದೆ. ಕೆಲವೇ ಗಂಟೆಗಳ ಹಿಂದೆ ಝಗಮಗಿಸುತ್ತಿದ್ದ, ಬೆಳಕಿನ ಹೊಳಪಿನಿಂದ ಮಿನುಗುತ್ತಿದ್ದ ಬಿಗ್ ಬಾಸ್ ಮನೆ ಈಗ ಕತ್ತಲೆಯಲ್ಲಿದೆ — ವೀಕ್ಷಕರಲ್ಲಿ ಕುತೂಹಲ ಮತ್ತು ನಿರಾಶೆಯ ವಾತಾವರಣ ಆವರಿಸಿದೆ.
