ಕರ್ನಾಟಕದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ ಬಾಸ್ ಕನ್ನಡ ಈಗಾಗಲೇ 11 ಸೀಸನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ರಾಜ್ಯದ 82% ಟಿವಿ ಪ್ರೇಕ್ಷಕರನ್ನು ತಲುಪಿದೆ. ಕಳೆದ ಒಂದು ದಶಕದಿಂದ ನಿರಂತರವಾಗಿ ಪ್ರಸಾರವಾಗುತ್ತಿರುವ ಈ ಶೋ ಪ್ರತಿ ಸೀಸನ್‌ಗೂ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ. ಶೋಗೆ ವಿಶೇಷ ಆಕರ್ಷಣೆ ತಂದಿರುವುದು ಕಿಚ್ಚ ಸುದೀಪ್ ಅವರ ನಿರೂಪಣೆ. ಅವರ ವಿಶಿಷ್ಟ ಶೈಲಿ, ಹಾಸ್ಯಮಿಶ್ರಿತ ಮಾತುಗಳು ಮತ್ತು ಸ್ಪರ್ಧಿಗಳೊಂದಿಗೆ ಹೊಂದಿಕೊಳ್ಳುವ ಕೌಶಲ್ಯವೇ ಬಿಗ್ ಬಾಸ್ ಕನ್ನಡದ ಪ್ರಮುಖ ಬಲವಾಗಿದೆ. ಸೆಪ್ಟೆಂಬರ್ 28ರಿಂದ ಆರಂಭವಾಗಲಿರುವ 12ನೇ ಸೀಸನ್‌ನ ನಿರೂಪಣೆಯನ್ನೂ ಸುದೀಪ್ ಮುಂದುವರಿಸಲಿದ್ದಾರೆ.
ಜಿಯೋಸ್ಟಾರ್ ದಕ್ಷಿಣ ವಿಭಾಗದ ಎಂಟರ್‌ಟೇನ್‌ಮೆಂಟ್ ಕ್ಲಸ್ಟರ್ ಮುಖ್ಯಸ್ಥ ಕೃಷ್ಣನ್ ಕುಟ್ಟಿ ಹೇಳುವಂತೆ, ಬಿಗ್ ಬಾಸ್ ಕನ್ನಡ ಕೇವಲ ಮನರಂಜನಾ ಶೋ ಮಾತ್ರವಲ್ಲ, ಇದು ಸಮುದಾಯಗಳನ್ನು ಸಂಪರ್ಕಿಸುವ ಸಾಂಸ್ಕೃತಿಕ ವೇದಿಕೆ. ವಿಭಿನ್ನ ಹಿನ್ನೆಲೆಯ ಸ್ಪರ್ಧಿಗಳು ಒಟ್ಟಿಗೆ ಬಂದು ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತಾರೆ. ಪ್ರತಿ ಸೀಸನ್‌ನಲ್ಲಿ ಹೊಸ ಆಟದ ವಿಧಾನಗಳು, ವಿಭಿನ್ನ ಸ್ಪರ್ಧಿಗಳ ಆಯ್ಕೆ ಮತ್ತು ತಿರುವುಗಳು ಶೋಗೆ ನಿತ್ಯ ಹೊಸತನವನ್ನು ನೀಡುತ್ತವೆ. ಇದುವರೆಗೆ ಅನೇಕ ಹೊಸ ತಾರೆಗಳು ಹಾಗೂ ಇನ್‌ಫ್ಲುವೆನ್ಸರ್‌ಗಳು ಬಿಗ್ ಬಾಸ್ ವೇದಿಕೆಯ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಜೊತೆಗೆ ಅನೇಕ ಬ್ರ್ಯಾಂಡ್‌ಗಳಿಗೆ ಇದು ಗ್ರಾಹಕರನ್ನು ತಲುಪುವ ದೊಡ್ಡ ವೇದಿಕೆಯಾಗಿದೆ.
ಸ್ಥಳೀಯ ಮೌಲ್ಯಗಳು, ಸಂಬಂಧಗಳು ಮತ್ತು ಮಾನವೀಯ ಕಥೆಗಳ ಪ್ರತಿಬಿಂಬವನ್ನು ತೋರಿಸುವ ಮೂಲಕ ಬಿಗ್ ಬಾಸ್ ಕನ್ನಡ ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾಗಿದೆ. ಅಜ್ಜ-ಅಜ್ಜಿ, ಮಕ್ಕಳು, ಮೊಮ್ಮಕ್ಕಳೊಂದಿಗೆ ಒಟ್ಟಾಗಿ ಕುಳಿತು ಚರ್ಚಿಸುತ್ತಾ ನೋಡಬಹುದಾದ ಕುಟುಂಬ ಒಗ್ಗಟ್ಟಿನ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಈಗ 12ನೇ ಸೀಸನ್‌ಗಾಗಿ ದಿನಗಣನೆ ಆರಂಭವಾಗಿದೆ. ಹೊಸ ಸ್ಪರ್ಧಿಗಳು, ಹೊಸ ಸವಾಲುಗಳು ಮತ್ತು ಹೆಚ್ಚುವರಿ ಮನರಂಜನೆಯೊಂದಿಗೆ ಬಿಗ್ ಬಾಸ್ ಕನ್ನಡ ಮತ್ತೆ ಪ್ರೇಕ್ಷಕರ ಮನ ಸೆಳೆಯಲು ಸಜ್ಜಾಗಿದೆ.
