ಬಿಗ್ ಬಾಸ್ ಮನೆಯಲ್ಲಿ ಈ ಸೀಸನ್ ಪ್ರೀತಿ, ನಾಟಕ, ಜಗಳಗಳ ಮಿಶ್ರಣವಾಗಿದೆ. ಈ ನಡುವೆ ರಾಶಿಕಾ ಶೆಟ್ಟಿ ಮತ್ತು ಸೂರಜ್ ಸಿಂಗ್ ಅವರ ‘ಲವ್ ಸ್ಟೋರಿ’ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಇಬ್ಬರ ನಡುವಿನ ಪ್ರೀತಿ ನಿಜವಾದದ್ದೇ ಅಥವಾ ನಾಟಕದ ಭಾಗವೇ ಎಂಬ ಪ್ರಶ್ನೆ ವೀಕ್ಷಕರ ಮನದಲ್ಲಿ ಮೂಡಿದೆ.

ರಾಶಿಕಾ ಶೆಟ್ಟಿ ಮನೆಯಲ್ಲಿ ಪ್ರಾರಂಭದಿಂದಲೂ ಶಾಂತವಾಗಿದ್ದರೂ, ಸೂರಜ್ ಸಿಂಗ್ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ನಂತರ ಆಕೆಯ ವರ್ತನೆ ಬದಲಾಗಿದೆ. ಸೂರಜ್ ಮನೆಗೆ ಬಂದ ಕೂಡಲೇ, “ರಾಶಿಕಾ ಕ್ಯೂಟ್ ಆಗಿ ಕಾಣಿಸ್ತಾರೆ” ಎಂದು ಹೇಳಿ ಆಕೆಗೆ ರೋಸ್ ಕೊಟ್ಟರು. ಆ ಕ್ಷಣದಿಂದಲೇ ಇವರ ಪ್ರೇಮದ ಚರ್ಚೆ ಪ್ರಾರಂಭವಾಯಿತು.
ಅದಾದ್ಮೇಲೆ ಇಬ್ಬರೂ ಒಂದರ ಜೊತೆಯಲ್ಲೇ ಹೆಚ್ಚು ಸಮಯ ಕಳೆದರು. ಪ್ರೀತಿಯ ಅಭಿವ್ಯಕ್ತಿ ತೋರಿಸುತ್ತಿದ್ದ ಇವರ ನಡವಳಿಕೆ ನೋಡಿದ ವೀಕ್ಷಕರು, “ಇಷ್ಟು ಬೇಗ ಪ್ರೀತಿ ಹೇಗೆ ಹುಟ್ಟಬಹುದು?” ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದೇ ವಿಚಾರವನ್ನು ಕೇಳಿದಾಗ ರಾಶಿಕಾ, “ಪ್ರೀತಿ ಎಲ್ಲಿ, ಹೇಗೆ ಹುಟ್ಟುತ್ತೆ ಹೇಳೋಕಾಗಲ್ಲ,” ಎಂದು ಉತ್ತರಿಸಿದರು.
ಆದರೆ ಈ ಉತ್ತರ ವೀಕ್ಷಕರಿಗೆ ತೃಪ್ತಿ ಕೊಡಲಿಲ್ಲ. ಕೆಲವರಿಗೆ ಇವರ ಪ್ರೀತಿ ಕೃತಕವಾಗಿ ಕಾಣಿಸಿದ್ದು, ಕೆಲವರಿಗೆ ಇದು ಶೋನಲ್ಲಿ ಗಮನ ಸೆಳೆಯುವ ಪ್ರಯತ್ನ ಎಂದು ಅನ್ನಿಸಿದೆ. ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಅವರ ನೈಜ ಪ್ರೇಮದ ಜೊತೆ ಹೋಲಿಸಿದಾಗ, ರಾಶಿಕಾ–ಸೂರಜ್ ಸಂಬಂಧ ಹೆಚ್ಚು ನಾಟಕೀಯವಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಇದೀಗ ವೀಕ್ಷಕರು “ನಗೋಕಾಗದೆ, ಅಳೋಕಾಗದೆ ನೋಡಬೇಕಾದ ಪ್ರೀತಿ ನಾಟಕ” ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಈಗಾಗಲೇ ಸುದೀಪ್ ಅವರು ಈ ಬಗ್ಗೆ ಎಚ್ಚರಿಕೆ ನೀಡಿದ್ದರೂ, ರಾಶಿಕಾ ತಮ್ಮ ಧೋರಣೆಯಲ್ಲಿ ಬದಲಾವಣೆ ತೋರಿಸಿಲ್ಲ. ಬಿಗ್ ಬಾಸ್ ಮನೆಯಲ್ಲಿ ಈ ಪ್ರೇಮದ ನಾಟಕ ಇನ್ನೂ ಎಷ್ಟು ದಿನ ಮುಂದುವರಿಯುತ್ತದೆ ಎಂಬುದೇ ಕುತೂಹಲವಾಗಿದೆ.
