ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಹಾಗೂ ಜಾಕಿ ಭಾವನಾ ಒಟ್ಟಿಗೆ 2 ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೊದಲಿಗೆ ‘ಟಗರು’ ಶಿವನ ಜೋಡಿ ಪಂಚಮಿ ಆಗಿ ಕೇರಳ ಚೆಲುವೆ ಮಿಂಚಿದ್ದರು. ಈ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಬಳಿಕ ‘ಭಜರಂಗಿ-2’ ಚಿತ್ರದಲ್ಲಿ ಜೊತೆಯಾಗಿದ್ದರು. ಇದೀಗ ಸೆಂಚುರಿ ಸ್ಟಾರ್ ಹಾಗೂ ಭಾವನಾ ಮೆನನ್ ಮತ್ತೆ ಜೊತೆಯಾಗುವ ಸುದ್ದಿ ಬಂದಿದೆ.
ಇಬ್ಬರು ಮತ್ತೆ ಒಟ್ಟಿಗೆ ನಟಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಶಿವಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಶಿವಣ್ಣ ’45’ ಹಾಗೂ ‘ಬೈರತಿ ರಣಗಲ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ’45’ ಚಿತ್ರಕ್ಕೆ ಅರ್ಜುನ್ ಜನ್ಯಾ ಆಕ್ಷನ್ ಕಟ್ ಹೇಳುತ್ತಿದ್ದು ಉಪೇಂದ್ರ, ರಾಜ್ ಬಿ. ಶೆಟ್ಟಿ ಕೂಡ ಜೊತೆಯಾಗಿದ್ದಾರೆ. ನರ್ತನ್ ನಿರ್ದೇಶನದ ‘ಬೈರತಿ ರಣಗಲ್’ ಚಿತ್ರವನ್ನು ತಮ್ಮದೇ ಬ್ಯಾನರ್ನಲ್ಲಿ ನಿರ್ಮಾಣ ನಿರ್ಮಿಸುತ್ತಿದ್ದಾರೆ. ಮತ್ತೆ ಕೆಲವು ಸಿನಿಮಾಗಳಲ್ಲಿ ಶಿವಣ್ಣ ನಟಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ.
ತೆಲುಗಿನಲ್ಲಿ ರಾಮ್ಚರಣ್ ಜೊತೆ ಒಂದು ಚಿತ್ರ ಒಪ್ಪಿಕೊಂಡಿದ್ದಾರೆ. ತಮಿಳು ಕಥೆಗಳನ್ನು ಕೇಳುತ್ತಿದ್ದಾರೆ. ಇದೆಲ್ಲದರ ನಡುವೆ ಡಾಲಿ ಧನಂಜಯ್ ನಟನೆಯ ‘ಉತ್ತರಕಾಂಡ’ ಚಿತ್ರದಲ್ಲೂ ಶಿವಣ್ಣ ನಟಿಸುವುದು ಪಕ್ಕಾ ಆಗಿದೆ. ರೋಹಿತ್ ಪದಕಿ ನಿರ್ದೇಶನದ ‘ಉತ್ತರಕಾಂಡ’ ಸಿನಿಮಾ ಚಿತ್ರೀಕರಣ ಇತ್ತೀಚೆಗೆ ಶುರುವಾಗಿದೆ. ಕೆಆರ್ಜಿ ಸ್ಟುಡಿಯೋಸ್ ಬ್ಯಾನರ್ನಲ್ಲಿ ಸಿನಿಮಾ ಮೂಡಿ ಬರುತ್ತಿದೆ.
‘ಉತ್ತರಕಾಂಡ’ ಚಿತ್ರದಲ್ಲಿ ಶಿವಣ್ಣ ಪ್ರಮುಖವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರ ಜೋಡಿಯಾಗಿ ಭಾವನಾ ಮೆನನ್ ನಟಿಸುವುದು ಬಹುತೇಕ ಖಚಿತವಾಗಿದೆ. ಜನವರಿ ತಿಂಗಳಲ್ಲೇ ‘ಉತ್ತರಕಾಂಡ’ ಚಿತ್ರಕ್ಕಾಗಿ ತಮ್ಮನ್ನು ಸಂಪರ್ಕಿಸಿದ್ದಾಗಿ ಭಾವನಾ ಮಾಹಿತಿ ನೀಡಿದ್ದಾರೆ. ಏಪ್ರಿಲ್ನಲ್ಲಿ ಶೂಟಿಂಗ್ ಅಂದಿದ್ದರು. ನನ್ನ ಭಾಗದ ಚಿತ್ರೀಕರಣ ಮೇ ತಿಂಗಳಲ್ಲಿ ಎಂದು ಹೇಳಿರುವುದಾಗಿ ಭಾವನಾ ತಿಳಿಸಿದ್ದಾರೆ.