ಭಾಗ್ಯಲಕ್ಷ್ಮೀ ಧಾರಾವಾಹಿಗೆ ಪ್ರಣಯ ರಾಜ ಶ್ರೀನಾಥ್ ಅವರು ಅಥಿತಿಯಾಗಿ ಬಂದಿದ್ದು, ಭಾಗ್ಯಾಳನ್ನು ಸನ್ಮಾನಿಸಬೇಕಾದವರು ಅತ್ತೆ ಕುಸುಮಾಗೆ ಸನ್ಮಾನಿಸಿದ್ದಾರೆ. ಅದಕ್ಕೆ ಕಾರಣ ಭಾಗ್ಯಾಳ ಮಾತು. ಭಾಗ್ಯಾ ತನ್ನ ಅತ್ತೆಯಲ್ಲಿಯೇ ಅಮ್ಮನನ್ನು ಕಾಣುತ್ತಿದ್ದಾಳೆ. ಕುಸುಮಾ ಕೂಡ ಸೊಸೆಯ ಪರವಾಗಿಯೇ ಸದಾ ಧ್ವನಿ ಎತ್ತುತ್ತಾಳೆ. ಮಗನನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ ಕುಸುಮಾ. ಸೊಸೆಯನ್ನು ದಡ್ಡಿ ಎಂದಿದ್ದಕ್ಕೆ ಶಾಲೆಗೆ ಕಳುಹಿಸಿದ್ದಾಳೆ. ಈಗ ಅದೇ ಸೊಸೆಯಿಂದ ಸನ್ಮಾನ ಸಿಗುತ್ತಿದೆ.
ಸೊಸೆ ಉದ್ಯೋಗಕ್ಕೆ ಹೋಗಬಾರದು ಎನ್ನುವುದು ಅತ್ತೆ ಕುಸುಮಾಳ ಇಚ್ಛೆ. ಇದೇ ಕಾರಣಕ್ಕೆ ಕುಸುಮಾ ಅವಳಿಗೆ ಕೆಲಸ ಸಿಕ್ಕಿರುವ ವಿಷಯ ಹೇಳಿರಲಿಲ್ಲ. ಭಾಗ್ಯಾಳ ವಿಷಯ ಟಿ.ವಿಯಲ್ಲಿ ನೋಡಿ, ಅವಳಿಗೆ ಸನ್ಮಾನ ಮಾಡುತ್ತಿರುವುದನ್ನು ಕುಸುಮಾ ಟಿವಿಯಲ್ಲಿ ನೋಡಿ ಅವಳ ಸನ್ಮಾನ ಕಾರ್ಯಕ್ರಮಕ್ಕೆ ಬರುತ್ತಾಳೆ. ಆದರೆ ಅಲ್ಲಿ ಗಣ್ಯಾತಿಗಣ್ಯರು ಬಂದಿರುವ ಕಾರಣ, ಕುಸುಮಾಳಿಗೆ ಎಂಟ್ರಿ ಕೊಡುವುದಿಲ್ಲ. ಸೆಕ್ಯುರಿಟಿ ಅವರ ಬಳಿ ಜಗಳವಾಡಿದಾಗ ಅವಳನ್ನು ತಳ್ಳಲಾಗುತ್ತದೆ. ಅತ್ತೆ ಬಿದ್ದಿದ್ದನ್ನು ನೋಡಿ ಅವಾರ್ಡ್ ತೆಗೆದುಕೊಳ್ಳುವುದನ್ನು ಬಿಟ್ಟು ಭಾಗ್ಯ ಓಡೋಡಿ ಬರುತ್ತಾಳೆ. ತನ್ನ ಅತ್ತೆಯನ್ನು ವೇದಿಕೆಗೆ ಕರೆತಂದು ಶ್ರೀನಾಥ್ ಅವರ ಕೈಯಿಂದ ತನಗೆ ಸಂದಬೇಕಿದ್ದ ಸನ್ಮಾನವನ್ನು ಅತ್ತೆಗೆ ಮಾಡಿಸುತ್ತಾಳೆ.
ನಾನು ಇಂದು ಹೀಗೆ ಇರಲು ಕಾರಣ, ನನ್ನ ಅತ್ತೆ. ಇಂಥ ಅತ್ತೆ ಇದ್ದರೆ ಏನು ಬೇಕಾದರೂ ಮಾಡಲು ಸಾಧ್ಯ ಎನ್ನುತ್ತಲೇ ನೋಡುಗರನ್ನು ಭಾವುಕಳಾಗಿಸಿದ್ದಾಳೆ ಭಾಗ್ಯ. ಸೊಸೆ ತನಗೆ ತಿಳಿಸದೇ ಕೆಲಸಕ್ಕೆ ಹೋಗಿದ್ದಾಳೆ ಎನ್ನುವ ಕುಸುಮಾಳ ಕೋಪ ಶಾಂತವಾಗಿದೆ. ಭಾಗ್ಯಾಳ ಸಾಧನೆಗೆ ಕಣ್ಣೀರಾಗಿದ್ದಾಳೆ. ಇದನ್ನು ನೋಡಿ ತಾಂಡವ್ ಇಂಗು ತಿಂದ ಮಂಗನಂತಾಗಿದ್ದಾನೆ. ಕಾರ್ಯಕ್ರಮದಲ್ಲಿ ಎಲ್ಲರೂ ಚಪ್ಪಾಳೆ ತಟ್ಟುತ್ತಿರುವಾಗ ಮನಸ್ಸಿಲ್ಲದ ಮನಸ್ಸಿನಿಂದ ತಾನೂ ಚಪ್ಪಾಳೆ ತಟ್ಟಿದ್ದಾನೆ. ತನ್ನ ಪತ್ನಿ ಇಷ್ಟೊಂದು ಮುಂದುವರೆಯುತ್ತಾಳೆ ಎಂದು ಆತ ಕನಸಿನಲ್ಲೂ ಊಹಿಸಿರಲಿಲ್ಲ.