ಅಸಾಧ್ಯವಾದ್ದುದ್ದನ್ನು ಕಷ್ಟಪಟ್ಟು ಸಾಧ್ಯವಾಗಿಸಿದರೆ ಅದನ್ನು ” ಭಗೀರಥ ” ಪ್ರಯತ್ನ ಎನ್ನುತ್ತಾರೆ. ಇಂತಹ ಒಂದು ವಿಭಿನ್ನ ಕಥೆಯನ್ನಿಟ್ಟಿಕೊಂಡು ಬರುತ್ತಿರುವ ಸಿನಿಮಾ “ಭಗೀರಥ”. ಈಗಾಗಲೇ ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರಕ್ಕೆ ಇತ್ತೀಚೆಗೆ ಕೆ.ಆರ್ ಪುರದಲ್ಲಿ ಮೂರು ದಿನಗಳ ಕಾಲ ” ಮಾವ ಮಾವ” ಎಂಬ ಪ್ರಮೋಷನಲ್ ಸಾಂಗ್ ನ ಚಿತ್ರೀಕರಣ ಮಾಡಲಾಗಿದೆ. ನಾಯಕ ಜಯಪ್ರಕಾಶ್, ನಾಯಕಿಯರಾದ ನಿಸರ್ಗ ಅಣ್ಣಪ್ಪ ಹಾಗೂ ರೂಪಶ್ರೀ ಈ ಹಾಡಿನ ಚಿತ್ರೀಕರಣದಲ್ಲಿ ಅಭಿನಯಿಸಿದ್ದಾರೆ. ನಾಗಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಾಡು ಹಾಗು ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.
ಹದಿನೈದು ವರ್ಷಗಳ ಹಿಂದೆ “ಬಾಯ್ ಫ್ರೆಂಡ್” ಚಿತ್ರದ ಮೂಲಕ ನಿರ್ದೇಶಕನಾದೆ. ಈಗ ವಿಭಿನ್ನ ಕಥೆಯುಳ್ಳ ಈ ಚಿತ್ರವನ್ನು ನಿರ್ದೇಶಿಸಿದ್ದೇನೆ. “ಭಗೀರಥ” ಹೆಸರೆ ಹೇಳುವಂತೆ ಅಸಾಧ್ಯವಾದುದ್ದನ್ನು ಸಾಧಿಸುವವನು ಎಂದು. ನಮ್ಮ ಚಿತ್ರದ ಕಥೆಯೂ ಇದೇ ಅರ್ಥದಲ್ಲಿ ಸಾಗುತ್ತದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಮುಂದಿನವಾರ ಚಿತ್ರ ಸೆನ್ಸಾರ್ ಮುಂದೆ ಬರಲಿದೆ. ಇತ್ತೀಚೆಗೆ ಈ ಚಿತ್ರದ ಪ್ರಮೋಷನಲ್ ಸಾಂಗ್ ನ ಚಿತ್ರೀಕರಣ ಕೆ ಆರ್ ಪುರದಲ್ಲಿ ನಡೆದಿದ್ದು, ಜಯಪ್ರಕಾಶ್, ನಿಸರ್ಗ, ರೂಪಶ್ರೀ ಭಾಗಿಯಾಗಿದ್ದರು. ಈ ಹಾಡು ಪ್ರಮೋಷನ್ ಗೆ ಮಾತ್ರ ಬಳಸಿಕೊಳ್ಳುವುದಿಲ್ಲ. ಚಿತ್ರದಲ್ಲೂ ಇರುತ್ತದೆ. ಮಂಗ್ಲಿ ಹಾಗೂ ವಿಜಯ್ ಪ್ರಕಾಶ್ ಈ ಹಾಡನ್ನು ಸದ್ಯದಲ್ಲೇ ಹಾಡಲಿದ್ದಾರೆ ಎಂದು ನಿರ್ದೇಶಕ ರಾಮ್ ಜನಾರ್ದನ್ ತಿಳಿಸಿದರು.
ಸಾಯಿ ರಮೇಶ್ ಪ್ರೊಡಕ್ಷನ್ ಲಾಂಛನದಲ್ಲಿ ನಾನು ಹಾಗೂ ಕೆ.ರಮೇಶ್ ಅವರು ಈ ಚಿತ್ರವನ್ನು ನಿರ್ಮಿಸಿದ್ದೇವೆ ಎಂದು ತಿಳಿಸಿದ ನಿರ್ಮಾಪಕ ಬಿ.ಭೈರಪ್ಪ, ಸಣ್ಣ ಪಾತ್ರ ಕೂಡ ಮಾಡಿರುವುದಾಗಿ ಹೇಳಿದರು. ಜರ್ನಿಲಿಸಂ ಮಾಡಿ ಪತ್ರಕರ್ತನಾಗಿದ್ದ ನಾನು, “ಜಮಾನ” ಚಿತ್ರದ ಮೂಲಕ ನಟನಾದೆ. “ಭಗೀರಥ” ಚಿತ್ರದಲ್ಲಿ ಯಾವುದಕ್ಕೂ ಹೆದರದ, ವಿಲ್ ಪವರ್ ಇರುವ ಮನುಷ್ಯನ ಪಾತ್ರ ನನ್ನದು. ಈ ಚಿತ್ರದಲ್ಲಿ ಸಾಹಸ ಸನ್ನಿವೇಶಗಳು ಹೈಲೆಟ್. ನಾನು ಕರಾಟೆ ಪಟು ಆಗಿರುವುದರಿಂದ ಸಾಹಸ ಸನ್ನಿವೇಶದಲ್ಲಿ ನಟಿಸುವುದು ಸುಲಭವಾಯಿತು ಎಂದು ತಿಳಿಸಿದ ನಾಯಕ ಜಯಪ್ರಕಾಶ್, ಇದೊಂದು ಕೌಟುಂಬಿಕ ಚಿತ್ರ ಎಂದರು.
ನನ್ನದು ಚಿತ್ರದಲ್ಲಿ ರಾಧಾ ಎಂಬ ಪಾತ್ರ ಎಂದು ನಿಸರ್ಗ ಅಣ್ಣಪ್ಪ ತಿಳಿಸಿದರೆ, ರುಕ್ಮಿಣಿ ನನ್ನ ಪಾತ್ರದ ಹೆಸರು ಎಂದರು ಮತ್ತೊಬ್ಬ ನಾಯಕಿ ರೂಪಶ್ರೀ. ಖಳನಟ ಶಶಿಧರ್, ನೃತ್ಯ ನಿರ್ದೇಶಕ ನಾಗಿ, ಛಾಯಾಗ್ರಾಹಕ ಮಹೇಶ್ ತಲಕಾಡು ಮುಂತಾದವರು “ಭಗೀರಥ” ಚಿತ್ರದ ಕುರಿತು ಮಾತನಾಡಿದರು. ಕಾರ್ಯಕಾರಿ ನಿರ್ಮಾಪಕ ಚೇತನ್ ರಮೇಶ್, “ಭಗೀರಥ” ಸಾಗಿಬಂದ ಬಗ್ಗೆ ವಿವರಿಸಿದರು. ಪ್ರದೀಪ್ ವರ್ಮ ಸಂಗೀತ ನಿರ್ದೇಶನ ಹಾಗೂ ಸೂರಿ ಚಿತ್ತೂರು ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ಜಯಪ್ರಕಾಶ್, ಚಂದನ ರಾಘವೇಂದ್ರ, ಸುಧಾ ಬೆಳವಾಡಿ, ಶಿವರಾಜ್ ಕೆ.ಆರ್ ಪೇಟೆ, ರವಿಕಾಳೆ, ಶ್ರೀನಿವಾಸಪ್ರಭು, ಬಲ ರಾಜವಾಡಿ, ನಯನ, ಸುರಭಿ ರವಿ, ಶ್ರೀಯಾ ಪಾವನಿ, ನಿಸರ್ಗ ಅಣ್ಣಪ್ಪ, ರೂಪಶ್ರೀ, ಶಶಿಧರ್ ಮುಂತಾದವರಿದ್ದಾರೆ.