ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಪರ್ಧಿ ಹಾಗೂ ನಿರೂಪಕಿ ಜಾಹ್ನವಿ ರಿಯಾಲಿಟಿ ಶೋನಲ್ಲಿ ತಮ್ಮ ವೈವಾಹಿಕ ಜೀವನದ ಕುರಿತು ಬಿಚ್ಚಿಟ್ಟ ಮಾತುಗಳು ಈಗ ಹೊಸ ವಿವಾದಕ್ಕೆ ಕಾರಣವಾಗಿವೆ. ಜಾಹ್ನವಿಯ ಮಾಜಿ ಪತಿ ಕಾರ್ತಿಕ್ ಅವರೇ ಈ ಆರೋಪಗಳಿಗೆ ತೀವ್ರ ಪ್ರತಿಕ್ರಿಯೆ ನೀಡಿ, “ಸಿಂಪಥಿ ಗಿಟ್ಟಿಸಿಕೊಳ್ಳಲು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾಳೆ” ಎಂದು ಕಿಡಿಕಾರಿದ್ದಾರೆ.

ಕಾರ್ತಿಕ್ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ, “ಮದುವೆಯಾದ ಮೊದಲಿನ ದಿನಗಳಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಕೆಲಸ ಹೋದ ಬಳಿಕ ಆಕೆಯ ವರ್ತನೆ ಸಂಪೂರ್ಣ ಬದಲಾಗಿದೆ. ನನ್ನ ತಾಯಿಯೊಟ್ಟಿಗೆ ಹೊಂದಾಣಿಕೆ ಆಗದ ಕಾರಣ ಬೇರೆ ಮನೆ ಮಾಡಿಸಿಕೊಂಡಳು. ಬಳಿಕ ಸ್ವಂತ ಮನೆ ಬೇಕೆಂದು ಹಠವಿಟ್ಟಳು, ನಾನು ಬಾಡಿಗೆ ಮನೆ ತೆಗೆದುಕೊಂಡೆ” ಎಂದಿದ್ದಾರೆ.
ಅವರು ಮುಂದುವರಿದು, “ನನ್ನ ಕೆಲಸ ಹೋದಾಗ ಆಕೆ ಬದಲಾಗಿದ್ದಳು. ಜಾಹ್ನವಿ ಮನೆಯ ಇಎಂಐ ಕೆಲ ಕಾಲ ಕಟ್ಟಿದರೂ ಇಡೀ ಸಾಲ ತೀರಿಸಿದಂತೆ ಹೇಳುವುದು ಸುಳ್ಳು. 60 ಸಾವಿರ ಸಂಬಳಕ್ಕೆ 1.5 ಕೋಟಿಯ ಫ್ಲ್ಯಾಟ್ ಹೇಗೆ ಖರೀದಿ ಮಾಡಬಹುದು?” ಎಂದು ಪ್ರಶ್ನಿಸಿದ್ದಾರೆ.ಹಲ್ಲೆಯ ವಿಚಾರದಲ್ಲಿ ಕಾರ್ತಿಕ್ ಒಪ್ಪಿಕೊಂಡು, “ಹೌದು, ನಾನು ಹೊಡೆದಿದ್ದೆ. ಕಾರಣ – ಆಕೆ ಬೇರೊಬ್ಬ ಗಂಡಸಿನ ಜೊತೆ ಅತಿಯಾದ ಸಲುಗೆಯಿಂದ ವರ್ತಿಸುತ್ತಿದ್ದಳು. ಖಾಸಗಿ ಫೋಟೊಗಳು ನನ್ನ ಕಣ್ಣಿಗೆ ಬಿದ್ದಾಗ ಸಿಟ್ಟಿನಲ್ಲಿದ್ದೆ” ಎಂದಿದ್ದಾರೆ.
ಅವರು ಜಾಹ್ನವಿಯ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, “ವಿಚ್ಛೇದನದ ನಂತರವೂ ನನ್ನ ಬಗ್ಗೆ ಮಾತನಾಡಿ ನಮ್ಮ ಕುಟುಂಬಕ್ಕೆ ತೊಂದರೆ ಕೊಡುತ್ತಾಳೆ. ಮಗನ ಖರ್ಚು ನ್ಯಾಯಾಲಯದ ಆದೇಶದಂತೆ ನೀಡುತ್ತಿದ್ದೇನೆ. ಆದರೆ ನನ್ನ ಕುಟುಂಬದ ಬಗ್ಗೆ ತಪ್ಪು ಹೇಳಿಕೆ ನೀಡಿದರೆ ಸಹಿಸೋದಿಲ್ಲ” ಎಂದು ಎಚ್ಚರಿಸಿದ್ದಾರೆ.ಅಷ್ಟೇ ಅಲ್ಲ, ಕಾರ್ತಿಕ್ ಅವರ ಹಾಲಿ ಪತ್ನಿಯೂ ಸಹ ಈ ವಿಚಾರದಲ್ಲಿ ಪ್ರತಿಕ್ರಿಯಿಸಿದ್ದು, “ನಾನು ಅವರ ವಿಚ್ಛೇದನಕ್ಕೆ ಕಾರಣವಲ್ಲ. ಜಾಹ್ನವಿ ಸುಳ್ಳು ಕಥೆ ಹೇಳಿ ಸಿಂಪಥಿ ಗಿಟ್ಟಿಸಿಕೊಳ್ಳುತ್ತಿದ್ದಾಳೆ” ಎಂದು ಹೇಳಿಕೊಂಡಿದ್ದಾರೆ.
ಈ ಆರೋಪ-ಪ್ರತಿಆರೋಪಗಳಿಂದ ಬಿಗ್ ಬಾಸ್ ಸೀಸನ್ 12 ಸ್ಪರ್ಧಿ ಜಾಹ್ನವಿಯ ವೈಯಕ್ತಿಕ ಜೀವನ ಮತ್ತೊಮ್ಮೆ ಚರ್ಚೆಯ ಕೇಂದ್ರವಾಗಿದೆ.
