ಬಿಗ್ ಬಾಸ್ ಕನ್ನಡ ಗ್ರ್ಯಾಂಡ್ ಫಿನಾಲೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ರೋಚಕ ಘಟ್ಟ ತಲುಪಿದ್ದ ಬಿಗ್ ಬಾಸ್ ಫಿನಾಲೆಯಲ್ಲಿ ಕೊನೆಯಲ್ಲಿ ಮೂವರು ಸ್ಪರ್ಧಿಗಳು ಉಳಿದುಕೊಂಡಿದ್ದರು. ರಜತ್, ತ್ರಿವಿಕ್ರಮ್ ಹಾಗೂ ಹನುಮಂತ ಬಿಗ್ ಬಾಸ್ ಫಿನಾಲೆ ತಲುಪಿದ್ದರು. ಈ ಮೂವರಲ್ಲಿ ಯಾರು ಗೆಲ್ಲೋರು? ಅನ್ನೋ ಕುತೂಹಲ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಲೇ ಇತ್ತು. ಕೊನೆಗೂ ಹನುಮಂತ ಬಿಗ್ ಬಾಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾನೆ.
ನಾಲ್ಕನೇ ವಾರದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಬಿಗ್ ಮನೆಯನ್ನು ಪ್ರವೇಶಿಸಿದ್ದ ಹನುಮಂತ ಮೊದಲಿನಿಂದಲೂ ವೀಕ್ಷಕರ ಫೇವರಿಟ್ ಆಗಿದ್ದ. ಹನುಮಂತನ ನೇರ ನುಡಿ ವೀಕ್ಷಕರಿಗೆ ಇಷ್ಟ ಆಗಿತ್ತು. ಹೀಗಾಗಿ ಹನುಮಂತನೇ ಬಿಗ್ ಬಾಸ್ ವಿನ್ನರ್ ಎಂದು ಸೋಶಿಯಲ್ ಮೀಡಿಯಾದಲ್ಲೂ ಜೋರಾಗಿಯೇ ಚರ್ಚೆಯಾಗುತ್ತಿತ್ತು. ಆದರೆ, ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಸ್ಪರ್ಧಿ ಗೆದ್ದ ಉದಾಹರಣೆಯೇ ಇರಲಿಲ್ಲ.
ಹೀಗಾಗಿ ಹನುಮಂತ ಮೊದಲ ಬಾರಿಗೆ ಬಿಗ್ ಬಾಸ್ ಗೆದ್ದು ದಾಖಲೆ ಮಾಡುತ್ತಾನಾ? ಇಲ್ಲ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟವರಿಗೆ ಗೆಲುವು ಒಲಿಯುವುದಿಲ್ಲವೋ ಅನ್ನೋ ಗೊಂದಲ ವೀಕ್ಷಕರಲ್ಲಿ ಇತ್ತು. ಆದರೆ, ಅದೆಲ್ಲವನ್ನೂ ಮೀರಿ ಹನುಮಂತನೇ ಬಿಗ್ ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದರು. ಹನುಮಂತನಿಗೆ ಗೆಲುವಿನ ಪಟ್ಟ ಒಲಿದು ಬಂದಿತ್ತು. ಇದೇ ಖುಷಿಯಲ್ಲಿ ಹನುಮಂತ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಹನುಮಂತನ ದಾರಿಯೇ ಬೇರೆಯಿತ್ತು. ಕಿರುತೆರೆ ವೀಕ್ಷಕರಿಗೆ ಹನುಮಂತ ಮೈಂಡ್ ಗೇಮ್ ಆಡಲಿಲ್ಲ. ಸ್ಟ್ರಾಟಜಿ ಆಡಲಿಲ್ಲ. ತನಗೆ ಹೇಗೆ ತೋಚುತ್ತೋ ಹಾಗೆ ಆಡಿದ್ದಾನೆ. ತನಗೆ ಏನು ಹೇಳಬೇಕೊ ಅದನ್ನು ಹೇಳಿದ್ದಾನೆ. ಅದಕ್ಕೆ ಆರಂಭದ ದಿನದಿಂದಲೇ ವೀಕ್ಷಕರಿಗೆ ತುಂಬಾನೇ ಇಷ್ಟ ಆಗಿದ್ದ. ಇನ್ನು ಈ ಹಳ್ಳಿ ಹೈದನದ್ದೂ ಒಂದು ಇನ್‌ಸ್ಟಾಗ್ರಾಂ ಖಾತೆಯಿದೆ ಅನ್ನೋದು ಬಹುತೇಕ ಮಂದಿಗೆ ಗೊತ್ತಿರಲಿಲ್ಲ. ಬಿಗ್ ಬಾಸ್ ಬಳಿಕ ಅದೇ ಖಾತೆಯಲ್ಲಿ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾನೆ.