ಉತ್ತರ ಕರ್ನಾಟಕ ಶೈಲಿಯ ರಗಡ್ ಕಥೆ ಇರುವ ‘ಬಯಲುಸೀಮೆ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ. 2 ನಿಮಿಷ 50 ಸೆಕೆಂಡ್ ಇರುವ ಟ್ರೇಲರ್ ಭಾರೀ ನಿರೀಕ್ಷೆ ಹೆಚ್ಚಿಸಿದೆ. ರೋಚಕ ತಿರುವುಗಳು, ಜವಾರಿ ಭಾಷೆಯ ಸಂಭಾಷಣೆ, ರಾಜಕೀಯ ಮೇಲಾಟದ ಸುತ್ತ ಕಥೆ ಸಾಗುತ್ತದೆ. ಈಗಾಗಲೇ ಹಾಡುಗಳ ಮೂಲಕ ಗಮನಸೆಳೆದಿರುವ ಬಯಲುಸೀಮೆ ಸಿನಿಬಳಗ ಟ್ರೇಲರ್ ಬಿಟ್ಟು ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.
ವರುಣ್ ಕಟ್ಟಿಮನಿ ಸಿನಿಮಾಗೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದು, ಸಂಯುಕ್ತ ಹೊರನಾಡು ನಾಯಕಿಯಾಗಿ ನಟಿಸಿದ್ದಾರೆ. ಆರ್ಮುಗಂ ರವಿಶಂಕರ್, ಟಿ.ಎಸ್ ನಾಗಾಭರಣ, ಯಶ್ ಶೆಟ್ಟಿ, ಭವಾನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ಲಕ್ಷ್ಮೀ ನಾಡಗೌಡರ್, ಸಂತೋಷ್ ಉಪ್ಪಿನ್, ನಾಗರಾಜ ಭಟ್, ಮಹೇಶ್ ದೊಡ್ಡಕಲ್ನವರ್, ಪ್ರದೀಪ್ ರಾಜ್ ಸೇರಿದಂತೆ ಬಹುದೊಡ್ಡ ತಾರಾಗಣ ಚಿತ್ರದಲ್ಲಿದೆ.
ಇದನ್ನೂ ಓದಿ: ನಾಗಶ್ರೀ ಬೇಗಾರ್; ಶಾರದೆಯ ನೆಲದಿಂದ ಬೆಳ್ಳಿತೆರೆಗೆ ಮತ್ತೊಬ್ಬ ನಾಯಕಿ
ಗಾಯಿತ್ರಿ ದೇವಿ ಕ್ರಿಯೇಷನ್ಸ್ ಮತ್ತು ಪಿ ಆರ್ ಎಸ್ ಕ್ರಿಯೇಷನ್ಸ್ ಬ್ಯಾನರ್ ನಡಿ ಲಕ್ಷ್ಮಣ್ ಸಾ ಶಿಂಗ್ರಿ, ಶ್ರೀಧರ್ ಬಿದರಳ್ಳಿ, ರಶ್ಮೀ ವರುಣ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗಜೇಂದ್ರಗಡ, ಬೀಳಗಿ, ಮುಂಬೈನಲ್ಲಿ ಚಿತ್ರವನ್ನು ಸೆರೆ ಹಿಡಿಯಲಾಗಿದ್ದು, ಸುಜಯ್ ಕುಮಾರ್ ಬಾವಿಕಟ್ಟಿ ಕ್ಯಾಮೆರಾವರ್ಕ್, ಮಾನಸಾ ಹೊಳ್ಳ ಸಂಗೀತ ನಿರ್ದೇಶನ, ಕಿರಣ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಉತ್ತರ ಕರ್ನಾಟಕದ ಖಡಕ್ ಖಾನಾವಳಿ ಊಟ ಇದ್ದಂಗೆ ಇರುವ ಬಯಲುಸೀಮೆ ಸಿನಿಮಾ ಇದೇ 18ಕ್ಕೆ ತೆರೆಗೆ ಬರಲಿದೆ.