Sandalwood Leading OnlineMedia

ಅಜಯ್ ರಾವ್ ಜೊತೆ ಹೊಸ ಸಿನಿಮಾ ಘೋಷಿಸಿದ ಶ್ರೀದೇವಿ ಎಂಟರ್ಟೈನರ್ಸ್- ‘ಬ್ಯಾಂಕ್ ಆಫ್ ಭಾಗ್ಯಲಕ್ಷಿ’ಗೆ ಹೆಚ್ ಕೆ ಪ್ರಕಾಶ್ ಬಂಡವಾಳ

‘ರಂಗಿ ತರಂಗ’, ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಖ್ಯಾತಿಯ ನಿರ್ಮಾಪಕ ಹೆಚ್. ಕೆ ಪ್ರಕಾಶ್ ಈ ಬಾರಿಯ ದೀಪಾವಳಿಗೆ ನಟ ಅಜಯ್ ರಾವ್ ಜೊತೆ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಬಾರಿಯೂ ಹೊಸ ಪ್ರತಿಭೆಗೆ ಅವಕಾಶ ನೀಡಿರುವ ನಿರ್ಮಾಪಕರು ಇಂಟ್ರಸ್ಟಿಂಗ್ ಟೈಟಲ್ ಕೂಡ ಅನೌನ್ಸ್ ಮಾಡಿದ್ದಾರೆ. ಅದುವೇ ‘ಬ್ಯಾಂಕ್ ಆಫ್ ಭಾಗ್ಯಲಕ್ಷಿ’. ಇದು ಹೆಚ್. ಕೆ ಪ್ರಕಾಶ್ ಅವರ ಶ್ರೀದೇವಿ ಎಂಟರ್ಟೈನರ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ಐದನೇ ಸಿನಿಮಾವಾಗಿದೆ.
 
 
‘ಬ್ಯಾಂಕ್ ಆಫ್ ಭಾಗ್ಯಲಕ್ಷಿ’ ಕಥೆ ಕೇಳಿ ಥ್ರಿಲ್ ಆಗಿರೋ ನಟ ಅಜಯ್ ರಾವ್ ಈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಪ್ರತಿ ಬಾರಿ ನವ ನಿರ್ದೇಶಕರಿಗೆ ಮೊದಲ ಆದ್ಯತೆ ನೀಡುವ ನಿರ್ಮಾಪಕರಾದ ಹೆಚ್ ಕೆ ಪ್ರಕಾಶ್ ಈ ಬಾರಿಯೂ ನವ ಹಾಗೂ ಪ್ರತಿಭಾವಂತ ನಿರ್ದೇಶಕನೊಂದಿಗೆ ಕೈ ಜೋಡಿಸಿದ್ದಾರೆ. ಅಭಿಷೇಕ್ ಎಂ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಸ್ಯಾಂಡಲ್ ವುಡ್ ಅಂಗಳಕ್ಕೆ ಪರಿಚಿತರಾಗುತ್ತಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಜೊತೆ ‘ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ’, ‘ಬಹುಪರಾಕ್’ ಮತ್ತು ‘ಆಪರೇಷನ್ ಅಲಮೇಲಮ್ಮ’ ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ‘ಪಿನಾಕ’ ಎಂಬ VFX ಸ್ಟುಡಿಯೋ ಕೂಡ ಹೊಂದಿರುವ ಅಭಿಷೇಕ್ ಎಂ ‘ಬ್ಯಾಂಕ್ ಆಫ್ ಭಾಗ್ಯಲಕ್ಷಿ’ ಮೂಲಕ ಚೊಚ್ಚಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಡಲು ಸಜ್ಜಾಗಿದ್ದಾರೆ.
 
 
 
ಬ್ಯಾಂಕ್ ವೊಂದನ್ನು ದರೋಡೆ ಮಾಡಲು ಹೊರಟವರ ಸುತ್ತ ಹೆಣೆಯಲಾದ ಇಂಟ್ರಸ್ಟಿಂಗ್ ಕಥಾಹಂದರ ಈ ಚಿತ್ರ ಒಳಗೊಂಡಿದೆ. ಇದಿಷ್ಟನ್ನೇ ರಿವೀಲ್ ಮಾಡಿರುವ ಸಿನಿಮಾ ತಂಡ ಮುಂಬರುವ ದಿನಗಳಲ್ಲಿ ಚಿತ್ರದ ಬಗ್ಗೆ, ನಾಯಕಿ ಮತ್ತು ಕಲಾವಿದರ ಬಳಗ ಇದೆಲ್ಲದರ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದೆ.
 
ಸದ್ಯ ಪ್ರಿಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದ್ದು, ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಅಭಿಷೇಕ್ ಜಿ ಕಾಸರಗೋಡು ಕ್ಯಾಮೆರಾ ನಿರ್ದೇಶನ, ತೇಜಸ್ ಆರ್ ಸಂಕಲನ, ರಾಘು ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

Share this post:

Related Posts

To Subscribe to our News Letter.

Translate »