ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ, ಝೈದ್ ಖಾನ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ಬನಾರಸ್. ಇದೇ ನವೆಂಬರ್ ೪ರಂದು ಈ ಚಿತ್ರ ದೇಶಾದ್ಯಂತ ತೆರೆಗಾಣಲಿದೆ. ಈಗಾಗಲೇ ಹಾಡುಗಳು, ಟ್ರೈಲರ್ ಸೇರಿದಂತೆ ನಾನಾ ದಿಕ್ಕುಗಳಲ್ಲಿ ಪ್ರೇಕ್ಷಕರನ್ನು ಸೆಳೆದಿರುವ ಬನಾರಸ್, ಬಿಡುಗಡೆಯ ಹೊಸ್ತಿಲಿನಲ್ಲಿ ಮತ್ತಷ್ಟು ಕಳೆಗಟ್ಟಿಕೊಂಡಿದೆ. ಇದೇ ಬಿಸಿಯಲ್ಲಿ ಪ್ರೀ ರಿಲೀಸ್ ಇವೆಂಟ್ ಅನ್ನು ಚಿತ್ರತಂಡ ಆಯೋಜಿಸಿದೆ. ಲೇಟೆಸ್ಟ್ ವಿಚಾರವೆಂದರೆ, ಈ ಇವೆಂಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಲಿದ್ದಾರೆ.
ಬನಾರಸ್ ಪ್ರೀ ರಿಲೀಸ್ ಇವೆಂಟ್ ಇದೇ 22ನೇ ತಾರೀಕಿನಂದು ಸಂಜೆ 7.30ಕ್ಕೆ ಸರಿಯಾಗಿ, ಹುಬ್ಬಳ್ಳಿಯ ರೈಲ್ವೇ ಸ್ಪೋರ್ಟ್ಸ್ ಗ್ರೌಂಡ್‌ನಲ್ಲಿ ನಡೆಯಲಿದೆ. ಸಾವಿರಾರು ಜನ ಸೇರಲಿರುವ ಈ ಅದ್ದೂರಿ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ, ವಿನೋದ್ ಪ್ರಭಾಕರ್, ಚಿಕ್ಕಣ್ಣ, ಅಭಿಷೇಕ್ ಅಂಬರೀಶ್ ಮುಂತಾದವರೂ ಪಾಲ್ಗೊಳ್ಳಲಿದ್ದಾರೆ. ನಿರ್ದೇಶಕ ಜಯತೀರ್ಥ, ಝೈದ್ ಖಾನ್, ಸೋನಲ್ ಮೊಂತೇರೋ ಸೇರಿದಂತೆ ಒಂದಿಡೀ ಚಿತ್ರತಂಡ ಭಾಗಿಯಾಗಲಿದೆ. ಈ ಸಂದರ್ಭದಲ್ಲಿ ಬನಾರಸ್ ಬಗೆಗಿನ ಮತ್ತಷ್ಟು ಬೆರಗುಗಳು ಅನಾವರಣಗೊಳ್ಳಲಿವೆ.