ತೆಲುಗು ಸಿನಿರಂಗದ ಮೆಗಾಸ್ಟಾರ್ ಚಿರಂಜೀವಿ ಮತ್ತು ನಂದಮೂರಿ ಕುಟುಂಬದ ನಂದಮೂರಿ ಬಾಲಕೃಷ್ಣ ನಡುವಿನ ವೈಮನಸ್ಯ ಹೊಸದೇನಲ್ಲ. ದಶಕಗಳಿಂದಲೇ ಇರುವುದು. ಆದರೆ ಇತ್ತೀಚಿನ ವರ್ಷಗಳಲ್ಲಿ ಎರಡು ಕುಟುಂಬಗಳ ನಡುವೆ ಸ್ನೇಹದ ವಾತಾವರಣ ನಿರ್ಮಾಣವಾಗಿತ್ತು. ಪವನ್ ಕಲ್ಯಾಣ್ ಟಿಡಿಪಿಗೆ ಕೈ ಜೋಡಿಸಿದ ನಂತರ ಚಂದ್ರಬಾಬು ನಾಯ್ಡು ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದುದೂ ಈ ಸ್ನೇಹಕ್ಕೆ ಬಲ ತುಂಬಿತ್ತು. ಚಿರಂಜೀವಿ ಮತ್ತು ಬಾಲಯ್ಯ ಕೂಡಾ ಹಲವು ವೇದಿಕೆಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

ಆದರೆ ಈ ಸ್ನೇಹದ ಬಣ್ಣ ಹೆಚ್ಚು ದಿನ ಉಳಿಯಲಿಲ್ಲ. ಆಂಧ್ರ ಅಸೆಂಬ್ಲಿಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಬಾಲಯ್ಯ, ಚಿರಂಜೀವಿ ವಿರುದ್ಧವೇ ಕಿಡಿಕಾರಿದ್ದು, ಹಳೆಯ ವೈಮನಸ್ಯವನ್ನು ಮತ್ತೆ ಹೊತ್ತಿಕೊಂಡಂತಾಗಿದೆ.
ಅಸೆಂಬ್ಲಿಯಲ್ಲಿ ಚರ್ಚೆಯ ತಿರುವು
ಆಂಧ್ರ ಅಸೆಂಬ್ಲಿಯಲ್ಲಿ ಜಗನ್ ಸರ್ಕಾರದ ಅವಧಿಯಲ್ಲಿ ನಡೆದ ಘಟನೆಗಳ ಕುರಿತು ಚರ್ಚೆ ಜಾರಿಯಲ್ಲಿತ್ತು. ಈ ವೇಳೆ ಸಚಿವ ಕಮಿನೇನಿ ಕೃಷ್ಣ ಶ್ರೀನಿವಾಸ್, ಚಿರಂಜೀವಿ ಜಗನ್ ಅವರನ್ನು ಭೇಟಿ ಮಾಡಿದ ಘಟನೆಯನ್ನು ನೆನಪಿಸಿಕೊಂಡರು. ಸಿನಿಮಾ ಟಿಕೆಟ್ ದರಗಳ ಕುರಿತು ನಡೆದ ಆ ಮಾತುಕತೆ ವೇಳೆ, ಚಿರಂಜೀವಿ ಮುಂದಾಳತ್ವ ವಹಿಸಿ ಹಲವಾರು ತಾರೆಯರನ್ನು ಕರೆದುಕೊಂಡು ಸಿಎಂ ನಿವಾಸಕ್ಕೆ ಹೋದರಂತೆ. ಆದರೆ ಆ ಪಟ್ಟಿಯಲ್ಲಿ ಬಾಲಯ್ಯ ಹೆಸರು ಇರಲೇ ಇಲ್ಲ ಎಂದು ಅವರು ಹೇಳಿದರು.
ಇದನ್ನು ಕೇಳಿದ ಬಾಲಕೃಷ್ಣ ಅಸೆಂಬ್ಲಿಯಲ್ಲೇ ಎದ್ದು ನಿಂತು, ತನ್ನ ಹೆಸರನ್ನು ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಇಟ್ಟಿದ್ದರು ಎಂದು ಸಿಟ್ಟಿನಿಂದ ಪ್ರಶ್ನಿಸಿದರು. ಅದಕ್ಕಿಂತ ಹೆಚ್ಚಾಗಿ, “ಅಲ್ಲಿ ಯಾರೂ ಗಟ್ಟಿಯಾಗಿ ಮಾತನಾಡಲಿಲ್ಲ. ಚಿರಂಜೀವಿ ಮಾತನಾಡಿದ ಕಾರಣಕ್ಕೇ ಜಗನ್ ಸಭೆಗೆ ಬಂದರು ಎಂಬುದು ಸುಳ್ಳು, ನಾನ್‌ಸೆನ್ಸ್” ಎಂದು ತೀವ್ರವಾಗಿ ಪ್ರತಿಕ್ರಿಯಿಸಿದರು.
ಮತ್ತಷ್ಟು ಗಾಢವಾದ ಅಸಮಾಧಾನ
ಬಾಲಯ್ಯ ಅವರ ಈ ಹೇಳಿಕೆ, ಚಿರಂಜೀವಿ ವಿರುದ್ಧದ ಅಸಮಾಧಾನವನ್ನು ಸ್ಪಷ್ಟಗೊಳಿಸಿದೆ. ಚಿರಂಜೀವಿ ಗಟ್ಟಿಯಾಗಿ ಮಾತನಾಡಿದ್ರಿಂದ ಜಗನ್ ಸಭೆಗೆ ಬಂದರು ಎನ್ನುವ ಮಾತೇ ಸುಳ್ಳು ಎಂದು ಸಾರ್ವಜನಿಕವಾಗಿ ಹೇಳಿರುವ ಬಾಲಯ್ಯ, ಪರೋಕ್ಷವಾಗಿ ಚಿರಂಜೀವಿಯ ವಿರುದ್ಧವೇ ವೈಮನಸ್ಯ ವ್ಯಕ್ತಪಡಿಸಿದ್ದಾರೆ.
ಇದರಿಂದ, ಇತ್ತೀಚೆಗೆ ಕರಗುತ್ತಿದ್ದ ಚಿರಂಜೀವಿ–ನಂದಮೂರಿ ಕುಟುಂಬಗಳ ನಡುವಿನ ಭಿನ್ನಮತಗಳು ಮತ್ತೆ ಭುಗಿಲೆದ್ದು, ಮುಂದಿನ ದಿನಗಳಲ್ಲಿ ಎರಡೂ ಕುಟುಂಬಗಳ ನಡುವಿನ ಸಂಬಂಧ ಯಾವ ದಿಕ್ಕಿನಲ್ಲಿ ಸಾಗುತ್ತದೆಯೋ ನೋಡಬೇಕಾಗಿದೆ.
