Sandalwood Leading OnlineMedia

`ಬಡವ್ರ ಮಕ್ಳೂ ಬೆಳಿಬೇಕು ಕಣ್ರಯ್ಯ’ : ಟೈಟಲ್ ಆಯ್ತು ಡಾಲಿ ಮಾತು!

 

ನಟ ಡಾಲಿ ಧನಂಜಯ ಅವರು ಸಮಾರಂಭವೊಂದರಲ್ಲಿ “ಬಡವ್ರ ಮಕ್ಳೂ ಬೆಳಿಬೇಕು ಕಣ್ರಯ್ಯ” ಎಂಬ ಮಾತು ಹೇಳಿದ್ದರು. ಆ ಮಾತು ಸಾಕಷ್ಟು ವೈರಲ್ ಆಗಿದೆ. ಈಗ ಆ ಮಾತೇ ಚಲನಚಿತ್ರದ ಶೀರ್ಷಿಕೆಯಾಗಿದೆ. ಶ್ರೀರಾಮ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿ.ಎಸ್.ವೆಂಕಟೇಶ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಮಂಜುಕವಿ ನಿರ್ದೇಶಿಸುತ್ತಿದ್ದಾರೆ. ಇತ್ತೀಚಿಗೆ ಈ ಚಿತ್ರದ ಮುಹೂರ್ತ ಸಮಾರಂಭ ರೇಣುಕಾಂಬ ಥಿಯೇಟರ್ ನಲ್ಲಿ ನೆರವೇರಿತು. ಬೆಂಗಳೂರು ಪೂರ್ವ ವಲಯದ ಡಿಸಿಪಿ ದೇವರಾಜ್ ಆರಂಭ ಫಲಕ ತೋರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಭಾ.ಮ.ಹರೀಶ್ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

ಇದನ್ನೂ ಓದಿ:- ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನೆರವೇರಿತು ನಿರ್ಮಾಪಕ ರಮೇಶ್ ರೆಡ್ಡಿ ಪುತ್ರಿ ವಿವಾಹ : Exclusive Images

ನಾನು ಕೋಲಾರ ಜಿಲ್ಲಾ ಪಂಚಾಯತ್ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೆ. ಚಿತ್ರರಂಗದ ಸಾಕಷ್ಟು ಗಣ್ಯರು ನನಗೆ ಪರಿಚಯ. ಎಷ್ಟೋ ಸ್ನೇಹಿತರು ಚಿತ್ರ ನಿರ್ಮಾಣ ಮಾಡುವಂತೆ ಹೇಳುತ್ತಿದ್ದರು. ಈಗ ಕಾಲ ಕೂಡಿ ಬಂದಿದೆ. ಡಾಲಿ ಅವರು ಹೇಳಿದ ಮಾತೇ ಈ ಚಿತ್ರ ನಿರ್ಮಾಣಕ್ಕೆ ಸ್ಪೂರ್ತಿ. ಮಂಜುಕವಿ ಅವರು ಮಾಡಿಕೊಂಡಿರುವ ಕಥೆ ತುಂಬಾ ಚೆನ್ನಾಗಿದೆ. ನಾನು ಕೂಡ ಬಡತನದಿಂದಲೇ ಬಂದಿರುವವನು. ಹಾಗಾಗಿ ಈ ಕಥೆ ತುಂಬಾ ಇಷ್ಟವಾಯಿತು. ನನ್ನ ಸಹೋದರ ಸಮಾನರಾದ ಡಿಸಿಪಿ ದೇವರಾಜ್ ಚಿತ್ರಕ್ಕೆ ಚಾಲನೆ ನೀಡಿದ್ದಾರೆ ಅವರಿಗೆ ಹಾಗೂ ಆಗಮಿಸಿರುವ ಎಲ್ಲರಿಗೂ ಧನ್ಯವಾದ ಎಂದರು ನಿರ್ಮಾಪಕ ಸಿ.ಎಸ್ ವೆಂಕಟೇಶ್

ಇದನ್ನೂ ಓದಿ:- ರಮೇಶ್ ರೆಡ್ಡಿ‌ ಮಗಳ ಮದುವೆಯಲ್ಲಿ ಸುಧಾಮೂರ್ತಿ, ರಮೇಶ್ ಅರವಿಂದ್ ಭಾಗಿ

ಡಾಲಿ ಅವರು ಹೇಳಿದ ಮಾತನ್ನು ಸ್ಪೂರ್ತಿಯಾಗಿಟ್ಟುಕೊಂಡು ಈ ಚಿತ್ರದ ಕಥೆ ಬರೆದಿದ್ದೇನೆ. ಬಡ ಕುಟುಂಬದಲ್ಲಿ ಹುಟ್ಟಿದ ಮಕ್ಕಳಿಗೆ ಎಷ್ಟೇ ಕಲೆ ಇದ್ದರೂ, ಚೆನ್ನಾಗಿ ಓದುವ ಹಂಬಲವಿದ್ದರೂ ಅವರನ್ನು ಬೆಳೆಸಲು ಯಾರು ಮುಂದೆ ಬರುವುದಿಲ್ಲ. ಅವರಲ್ಲಿರುವ ಪ್ರತಿಭೆ ಹಾಗೆ ನಶಿಸಿ ಹೋಗುತ್ತದೆ. ಹಾಗಾಗಬಾರದು ಪ್ರತಿಭೆವುಳ್ಳ ಬಡಮಕ್ಕಳ ಕೀರ್ತಿ ಬೆಳಗಬೇಕು ಇದೇ ಚಿತ್ರದ ಕಥಾಹಂದರ.ಈ ಕಥೆ ಇಷ್ಟವಾಗಿ ಸಿ.ಎಸ್.ವೆಂಕಟೇಶ್ ಅವರು ನಿರ್ಮಾಣಕ್ಕೆ ಮುಂದಾಗಿದ್ದಾರೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಸುಚೇಂದ್ರ ಪ್ರಸಾದ್ ಹಾಗೂ ಸಂಗೀತ ಅವರು ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರ ಮಕ್ಕಳ ಪಾತ್ರದಲ್ಲಿ ರಾಜವರ್ಧನ್, ಲಾವಣ್ಯ  ವೈಭವಿ ಅಭಿನಯಿಸುತ್ತಿದ್ದಾರೆ. ಫ್ರೆಂಡ್ಸ್ ವಾಸು, ಮೂಗೂರು ಸುರೇಶ್, ಚಂದ್ರಪ್ರಭ, ಚೈತ್ರಾ ಕೊಟ್ಟೂರು, ಮಂಜು ಪಾವಗಡ, ಚಿದಾನಂದ್, ಜಗದೀಶ್ ಕೊಪ್ಪ ಶಿವಾರೆಡ್ಡಿ ಸನತ್ .ವಿನೋದ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ನಾಲ್ಕು ಹಾಡುಗಳಿದ್ದು ನಾನೇ ಸಂಗೀತ ನೀಡುತ್ತಿದ್ದೇನೆ‌.‌ ತಂದೆ‌ – ಮಗಳ ಬಾಂಧವ್ಯದ ಹಾಡೊಂದನ್ನು ಅನುರಾಧ ಭಟ್ ಹಾಡಿದ್ದಾರೆ.  ಹಿನ್ನೆಲೆ ಸಂಗೀತ ನೀಡುವುದರೊಂದಿಗೆ ವಿನುಮನಸು ಪ್ರಮುಖಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ರೇಣುಕುಮಾರ್ ಛಾಯಾಗ್ರಹಣ ,  ವೆಂಕಿ ಯುಡಿವಿ ಸಂಕಲನ ಹಾಗೂ ಗಿರೀಶ್ ಸಾಕಿ, ಸಂಗೀತ ಶೆಟ್ಟಿ ವಿಕ್ಟರ್ ದಯಾಳ್  ನಿರ್ದೇಶನದ ತಂಡದಲ್ಲಿದ್ದಾರೆ ಎಂದು ನಿರ್ದೇಶಕ ಮಂಜುಕವಿ ತಿಳಿಸಿದರು.  ಸುಚೇಂದ್ರ ಪ್ರಸಾದ್, ಸಂಗೀತ ಶೆಟ್ಟಿ, ಫ್ರೆಂಡ್ಸ್ ವಾಸು, ಮೂಗೂರು ಸುರೇಶ್, ಜಗದೀಶ್ ಕೊಪ್ಪ ಮುಂತಾದ ಕಲಾವಿದರು ಚಿತ್ರದ ಕುರಿತು ಮಾತನಾಡಿದರು.

Share this post:

Related Posts

To Subscribe to our News Letter.

Translate »