ಒಳ್ಳೆ ಸ್ಕ್ರಿಪ್ಟ್ ಗಳಿಗೆ ನಿರ್ಮಾಪಕರು ಸಿಗ್ತಿಲ್ಲ, ಆಸಕ್ತ ಹೊಸ ನಿರ್ಮಾಪಕರುಗಳಿಗೆ ಒಳ್ಳೆ ಸ್ಕ್ರಿಪ್ಟ್ ಆಯ್ಕೆ ಮಾಡೋದು ಗೊತ್ತಿಲ್ಲ, ದೊಡ್ಡ ನಿರ್ಮಾಪಕರುಗಳಿಗೆ ಹೊಸಬರು ಬೇಕಿಲ್ಲ, ಸ್ಟಾರುಗಳಿಗೆ ಇದ್ಯಾವುದೂ ಬೇಕಾಗಿಲ್ಲ. ಹಣ ಕಳಕೊಂಡ ನಿರ್ಮಾಪಕ, ಲಿಮಿಟೆಡ್ ಬಜೆಟ್ಟಲ್ಲಿ ಕಷ್ಟಪಟ್ಟು ಸಿನೆಮಾ ಮುಗಿಸಿದ ನಿರ್ದೇಶಕ ಇವರಿಬ್ಬರ ಅಳಲು ʼಕನ್ನಡ ಸಿನೆಮಾಗಳಿಗೆ ಪ್ರೇಕ್ಷಕರು ಬರ್ತಿಲ್ಲʼ. ಇಲ್ಲಿ ಪ್ರೇಕ್ಷಕರದ್ದು ತಪ್ಪಿಲ್ಲ.
ಪ್ರೇಕ್ಷಕರು ತಾವು ಬೆವರು ಸುರಿಸಿ ದುಡಿದ ದುಡಿಮೆಯನ್ನು ವಾರದಲ್ಲಿ ರಿಲೀಸ್ ಆಗುವ ಹತ್ತು-ಹದಿನಾರು ಸಿನೆಮಾಗಳಿಗೆ ಯಾಕೆ ಸುರಿಬೇಕು? ಅದಲ್ಲದೆ ಸಿನೆಮಾ ಎಂಬುದು ಒಬ್ಬ ಜನಸಾಮಾನ್ಯನ ಕಟ್ಟಕಡೆಯ ಆಯ್ಕೆ. ಮನರಂಜನೆಗೆ ಆತ ಸಿನೆಮಾನೇ ನೋಡಬೇಕಿಲ್ಲ, ತರಹೇವಾರಿ ಆಯ್ಕೆಗಳು ಆತನ ಮುಂದಿವೆ.
ಅಂಥದ್ದರಲ್ಲಿ ನಾವು ಸಿನೆಮಾ ಮಂದಿ ನಮ್ಮ ಸಿನೆಮಾಗಳಿಗೆ ಪ್ರೇಕ್ಷಕರನ್ನು ಹೇಗೆ ಕರೆಯಬೇಕು, ಪ್ರೇಕ್ಷಕ ಪ್ರಭುವನ್ನು ಹೇಗೆ ಅಟ್ರಾಕ್ಟ್ ಮಾಡ್ಬೇಕು, ಯಾವ ರೀತಿಯ ಪಬ್ಲಿಸಿಟಿ ಮಾಡ್ಬೇಕು ಇದರ ಬಗ್ಗೆ ಯೋಚನೆ ಮಾಡುವುದು ಒಳಿತು.
ಮಲಯಾಳಂ ಚಿತ್ರರಂಗದಲ್ಲಿ ಯಾಕೆ ಅತಿ ಹೆಚ್ಚು ಒಳ್ಳೆಯ ಸಿನೆಮಾಗಳು ಬರ್ತಿವೆ, ನಮ್ಮ ಸಿನೆಮಾವನ್ನು ಮೂಸಿ ನೋಡದ ಮಂದಿ ಭಾಷೆ ಅರ್ಥ ಆಗದ ಮಲಯಾಳಂ ಸಿನೆಮಾಗಳನ್ನು ಯಾಕೆ ಬಾಯಿ ಚಪ್ಪರಿಸಿ ನೋಡ್ತಿದ್ದಾರೆ? ಮಲಯಾಳಂ ಸಿನೆಮಾಗಳಿಗೆ ದೊಡ್ಡ ಮಾರ್ಕೆಟ್ ಕರ್ನಾಟಕದಲ್ಲಿ ಹೇಗೆ? ಕನ್ನಡ ಸಿನೆಮಾಗಳಿಗೆ ಪೇಕ್ಷಕ ಬರುವುದಿಲ್ಲ ಎಂಬ ಮಾತು ಸತ್ಯವಿರುತ್ತಿದ್ದರೆ ʼಕಾಂತಾರʼ ಸಿನೆಮಾವನ್ನು ಯಾಕೆ ಪ್ರೇಕ್ಷಕ ಒಪ್ಪಿ ಅಪ್ಪಿಕೊಂಡ? ಕಾಂತಾರದಲ್ಲಿ ಯಾವ ಸ್ಟಾರ್ ಣ ನಟ ಇದ್ರು? ಕಾರಣ ಕಥೆಯ ಗಟ್ಟಿತನ, ಅಷ್ಟೇ ಬಿಗಿಯಾದ ನಿರೂಪಣೆ ಮತ್ತು ಅತ್ಯುತ್ತಮ ತಂತ್ರಜ್ಞರ ತಂಡ.
ಆಮೇಲೆ ಬಂದಂತಹ ಅದೆಷ್ಟೋ ಉತ್ತಮ ಸಿನೆಮಾಗಳಿಗೆ ಸುಗಮವಾದ ದಾರಿ ಸಿಕ್ಕಿಲ್ಲ, ಕಾರಣ ಎರಡು ಕೋಟಿಯ ಕಥೆಯನ್ನು ಎಂಭತ್ತು ಲಕ್ಷದಲ್ಲಿ ಮುಗಿಸಿ ಎನ್ನುವ ನಿರ್ಮಾಪಕರು, ಒಳ್ಳೆಯ ತಂತ್ರಜ್ಞರಿಗೆ, ಕಥೆ ಕಟ್ಟುವ ಕೆಲಸಕ್ಕೆ ಬಜೆಟ್ ಹಾಕುವುದನ್ನು ಬಿಟ್ಟು ಬೇರೆಲ್ಲಾ ಶೋಕಿಗಳಿಗೆ ದುರುಪಯೋಗಪಡಿಸಿ ನಮ್ಮ ಬಜೆಟ್ ನಾಲ್ಕು ಕೋಟಿ ಎಂದು ಬೊಗಳೆ ಬಿಡುವ ನಿರ್ಮಾಪಕರು ಮತ್ತು ಮಾರ್ಕೆಟ್ ಬಗ್ಗೆ, ಪಬ್ಲಿಸಿಟಿ ಬಗ್ಗೆ ಒಂಚೂರು ನಾಲೆಡ್ಜ್ ಇಲ್ಲದ ಸದಭಿರುಚಿಯ ನಿರ್ಮಾಪಕರು.
ಇದನ್ನೂ ಓದಿ:ಈ ವಾರ ಓಟಿಟಿಯಲ್ಲಿ ಯಾವೆಲ್ಲಾ ಸಿನಿಮಾ ಹಾಗೂ ವೆಬ್ ಸಿರೀಸ್ ರಿಲೀಸ್ ಆಗ್ತಿವೆ ಗೊತ್ತಾ..?
ಇತ್ತೀಚೆಗೆ ಸಿಕ್ಕ ಮಲಯಾಳಂ ಚಿತ್ರರಂಗದ ನನ್ನ ಗೆಳೆಯರೊಬ್ಬರು ಕೇಳಿದ ಪ್ರಶ್ನೆ ʼನಮ್ಮಲ್ಲಿ ಮಮ್ಮುಟ್ಟಿ, ಮೋಹನ್ ಲಾಲ್, ಪ್ರಥ್ವಿರಾಜ್ ರಿಂದ ಹಿಡಿದು ಇತ್ತೀಚಿನ ಫಹಾದ್ ಫಾಸಿಲ್, ದುಲ್ಕರ್ ಸಲ್ಮಾನ್, ಶ್ರೀನಾಥ್ ಬಾಸಿಯವರೆಗೂ ಲಾಭ ಮಾಡಿದ ಕಲಾವಿದರೆಲ್ಲರೂ ಸ್ವಂತ ಪ್ರೊಡಕ್ಷನ್ ಹೌಸ್ ಕಟ್ಟಿ ಹೊಸಬರನ್ನು ಬೆಳೆಸ್ತಿದ್ದಾರೆ, ಹೊಸ ಸ್ಕ್ರಿಪ್ಟ್ ಗಳನ್ನು ಕೇಳ್ತಿದ್ದಾರೆ, ನಿಮ್ಮಲ್ಲಿ ಯಾಕಿಲ್ಲ?ʼ. ಆತನ ಪ್ರಶ್ನೆಗೆ ನನ್ನಲ್ಲಿ ಇದ್ದ ಉತ್ತರ ʼಪರಮ್ವಾ ಸ್ಟುಡಿಯೋಸ್, ಪಿಆರ್ ಕೆ ಮತ್ತು ಡಾಲಿ ಪಿಕ್ಚರ್ಸ್ʼ ಮಾತ್ರ.
ನಮ್ಮ ಚಿತ್ರರಂಗದ ಸ್ಟಾರುಗಳು, ಗಣ್ಯರು, ದೊಡ್ಡ ಕಲಾವಿದರು ಇವರುಗಳಿಗೆಲ್ಲಾ ಆಸಕ್ತಿ ಇಲ್ಲವೋ ಅಥವಾ ಅಸಡ್ಡೆಯೋ ಗೊತ್ತಿಲ್ಲ. ನಮ್ಮ ಸ್ಟಾರುಗಳಾದ ಉಪೇಂದ್ರ, ಸುದೀಪ್, ದರ್ಶನ್, ಶಿವಣ್ಣ, ಯಶ್, ಗಣೇಶ್, ರವಿಚಂದ್ರನ್ ಅವರು ತಮ್ಮ ಪ್ರೊಡಕ್ಷನ್ ಹೌಸ್ ಗಳನ್ನು ಹುಟ್ಟಾಕಿ ಹೊಸ ಸ್ಕ್ರಿಪ್ಟ್ ಗಳು, ಹೊಸ ನಿರ್ದೇಶಕರಿಗೆ ಅವಕಾಶ ನೀಡಿದ್ದಿದ್ದರೆ ಒಂದಷ್ಟು ಹೊಸ ನಿರ್ದೇಶಕರು ಹುಟ್ಟಿಕೊಳ್ಳುತ್ತಿದ್ದರಲ್ಲವೆ? ಹೊಸ ಕಥೆಗಳು, ಹೊಸ ರೀತಿಯ ಸಿನೆಮಾಗಳು ಬಂದು, ಪ್ರೇಕ್ಷಕರೂ ಬರುತ್ತಿದ್ದರಲ್ಲವೇ? ಬೆಳೆಸುವ ಮನಸುಗಳಿಲ್ಲದೆ, ಬೆಳೆಯುವ ಮೊಳಕೆಗಳೂ ಇಲ್ಲವಾಗಿವೆ. ಇತ್ತೀಚೆಗೆ ಒಂದಷ್ಟು ಭರವಸೆಯನ್ನು ಹುಟ್ಟು ಹಾಕಿದ ಹೊಸ ನಿರ್ದೇಶಕರು ಎರಡನೇ ಚಿತ್ರ ಮಾಡಲಾಗದೆ, ರೂಂ ರೆಂಟ್ ಕಟ್ಟಲಾಗದೆ, ಕೈಯಲ್ಲಿ ಕಾಸಿಲ್ಲದೆ ಸಿನೆಮಾ ಬೇಕಾ ಎಂಬ ಪ್ರಶೆಯನ್ನು ತಮಗೇ ತಾವೇ ಕೇಳಿಕೊಳ್ಳುತ್ತಿದ್ದಾರೆ.
ನಮ್ಮ ಚಿತ್ರರಂಗದ ಸ್ಟಾರುಗಳು, ಗಣ್ಯರು, ದೊಡ್ಡ ಕಲಾವಿದರು ಇವರುಗಳಿಗೆಲ್ಲಾ ಆಸಕ್ತಿ ಇಲ್ಲವೋ ಅಥವಾ ಅಸಡ್ಡೆಯೊ ನಮ್ಮ ಬುದ್ಧಿವಂತ ನಿರ್ದೇಶಕ, ನಟ ಉಪೇಂದ್ರ ಅವರು ತಮ್ಮ ʼಉಪ್ಪಿ ಸಿನೆಮಾಸ್ʼ ಎಂಬ ಪ್ರೊಡಕ್ಷನ್ ಸಂಸ್ಥೆಯೊಂದನ್ನು ಕಟ್ಟಿ ʼಕರ್ನಾಟಕದಲ್ಲಿರುವ ಹೊಸ ಕಥೆಗಳನ್ನು ಮಾಡಿಟ್ಟುಕೊಂಡಿರುವ ಯುವ ನಿರ್ದೇಶಕರೆಲ್ಲರೂ ಕಥೆಗಳನ್ನು ಕಳಿಸ್ರಪ್ಪ, ನಿಮ್ಮ ಕಥೆಗಳಲ್ಲಿ ಹತ್ತು ಕಥೆಗಳನ್ನು ಆಯ್ಕೆ ಮಾಡಿ ಆಯಾ ಕಥೆಗೆ ಸಂಬಂಧಪಟ್ಟವರನ್ನು ಕರೆಸಲಾಗುವುದು. ಕಥೆಯ ಜೊತೆಗೆ ಪೂರ್ತಿ ಚಿತ್ರಕಥೆ, ಸ್ಟೋರಿ ಬೋರ್ಡ್ ಇವುಳನ್ನೆಲ್ಲಾ ರೆಡಿ ಮಾಡಿಟ್ಟುಕೊಳ್ಳಿ. ಆಯ್ಕೆಯಾದ ಹತ್ತು ಕಥೆಗಳ ಚಿತ್ರಕಥೆಯನ್ನು ಸ್ವತಃ ಉಪೇಂದ್ರರವರೇ ಕೇಳುವವರಿದ್ದಾರೆ.
ಆ ಹತ್ತು ಚಿತ್ರಕಥೆಗಳಲ್ಲಿ ಕೊನೆಗೆ ಎರಡನ್ನು ಆಯ್ಕೆ ಮಾಡಿ ಸೂಕ್ತವಾದ ಬಜೆಟ್ ನೊಂದಿಗೆ ಸಿನೆಮಾ ನಿರ್ಮಾಣ ಮಾಡಲಿದ್ದಾರೆʼ ಎಂಬ ಪೋಸ್ಟ್ ವೊಂದನ್ನು ಸಾಮಾಜಿಕ ತಾಲತಾಣದಲ್ಲಿ ಬಿಟ್ಟರೆ ಖಂಡಿತವಾಗಿಯೂ ಇಬ್ಬರು ಅದ್ಭುತ ನಿರ್ದೇಶಕರು ಹುಟ್ಟುತ್ತಾರೆ. ಉಪೇಂದ್ರ ಅವರ ನಿರ್ಮಾಣ ಅಂದ ಮೇಲೆ, ಸ್ವತಃ ಉಪೇಂದ್ರ ಅವರೇ ಚಿತ್ರಕಥೆಯನ್ನು ಕೇಳಿದ್ದಾರೆ ಅಂದ ಮೇಲೆ ಪ್ರೇಕ್ಷಕರ ಕೊರತೆ ಖಂಡಿತವಾಗಿಯೂ ಇರಲಿಕ್ಕಿಲ್ಲ.
ಇದ್ದರೂ ಹಾಕಿದ ಬಂಡವಾಳ ಬಾರದಷ್ಟು ಲಾಸ್ ಖಂಡಿತ ಆಗಲಾರದು. ಇದೇ ರೀತಿ ರವಿಚಂದ್ರನ್ ಅವರು ʼರೊಮ್ಯಾಂಟಿಕ್ ಕಥೆಗಳನ್ನು ಕಳಿಸ್ರಪ್ಪ, ಸಿನೆಮಾ ಮಾಡೋಣʼ ಅಂದಾಗ ಹೊಸ ಕಥೆಗಳು, ಕಥೆಗಾರರು, ನಿರ್ದೇಶಕರು ಖಂಡಿತ ಹುಟ್ಟಲು ಸಾಧ್ಯ. ಇದೇ ರೀತಿಯಲ್ಲಿ ಸುದೀಪ್, ಯಶ್, ದರ್ಶನ್, ಗಣೇಶ್ ಇವರುಗಳೂ ಮನಸು ಮಾಡಬೇಕಿದೆ.
ಪ್ರೊಡಕ್ಷನ್ ಹೌಸ್ ಅಲ್ಲದೆ ಸ್ಟಾರುಗಳು ಹೊಸಬರ ಕಥೆಗಳನ್ನು ಕೇಳಿ, ಬಾರಪ್ಪ ನನ್ಗೊಂದು ಸಿನೆಮಾ ಮಾಡು ಅಂದರೆ ಇನ್ನೂ ಹತ್ತು ವರ್ಷ ಹೆಚ್ಚಿಗೆ ನಮ್ಮ ಸ್ಟಾರುಗಳು ಬಾಳುತ್ತಾರೆ. ಮಲಯಾಳಂ ಸಿನೆಮಾರಂಗದಂತೆ ನಮ್ಮ ಚಿತ್ರರಂಗವೂ ಬೆಳೆಯುತ್ತದೆ. ಒಟ್ನಲ್ಲಿ ಪ್ರೇಕ್ಷಕರ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ಉಪೇಂದ್ರರವರು ಹೇಳಿದಂತೆ ನಾನು, ನೀನು ಎಂಬುದನ್ನು ಬಿಟ್ಟು ನಾವು ಬೆಳಿಬೇಕು ಎಂದು ಯೋಚಿಸಿದರೆ ಉದ್ಧಾರ ಸಾಧ್ಯ.
-by *ARJUN Louis, WRITER/DIRECTOR