Sandalwood Leading OnlineMedia

ವಿಶ್ವಾದ್ಯಂತ ಸದ್ದು ಮಾಡಿದ `ಅಸ್ಮಿನ್’ ಈಗ ಯೂಟ್ಯೂಬ್ ನಲ್ಲಿ!

ಗಂಟುಮೂಟೆಯಂಥಾ ಭಿನ್ನ ಚಿತ್ರವೊಂದನ್ನು ನಿರ್ದೇಶನ ಮಾಡಿ ಗಮನ ಸೆಳೆದಿದ್ದವರು ರೂಪಾ ರಾವ್. ಇದೊಂದು ಚಿತ್ರದ ಮೂಲಕವೇ ತಮ್ಮದು ಭಿನ್ನ ಪಥ ಅನ್ನೋದರ ಸುಳಿವು ನೀಡಿದ್ದ ಅವರು `ಕೆಂಡ’ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಅಚ್ಚರಿ ಮೂಡಿಸಿದ್ದರು. ಇದೀಗ ಮತ್ತೆ ನಿರ್ದೇಶನಕ್ಕೆ ಮರಳಿರುವ ರೂಪಾ ರಾವ್ `ಅಸ್ಮಿನ್’ ಎಂಬ ಮಿನಿ ಫೀಚರ್ ಫಿಲಂವೊಂದನ್ನು ನಿರ್ದೇಶಿಸಿದ್ದಾರೆ. ಈ ಮಿನಿ ಫೀಚರ್ ಫಿಲಂ ಇದೀಗ ಅವರ ಯೂಟ್ಯೂಬ್ ಚಾನೆಲ್ಲಿನಲ್ಲಿ ಬಿಡುಗಡೆಗೊಂಡಿದೆ. ಅದಕ್ಕೆ ನೋಡುಗರ ಕಡೆಯಿಂದ ಸಿಗುತ್ತಿರುವ ಪ್ರತಿಕ್ರಿಯೆ, ಆ ಸೂಕ್ಷ್ಮ ಕಥನ ನೋಡಿದವರೆಲ್ಲರ ಮನಸಿಗಿಳಿದು ಕಾಡುತ್ತಿರೋ ರೀತಿ ಕಂಡು ಒಂದಿಡೀ ತಂಡ ಖುಷಿಗೊಂಡಿದೆ.

ಅಸ್ಮಿನ್ ಈಗಾಗಲೇ ವಿಶ್ವಾದ್ಯಂತ ಗಮನ ಸೆಳೆದಿರುವ ಮಿನಿ ಫೀಚರ್ ಫಿಲಂ. ವಿಶ್ವದ ಪ್ರತಿಷ್ಠಿತ ಫಿಲಂ ಫೆಸ್ಟಿವಲ್ ಗಳಿಗೆ ಆಯ್ಕೆಯಾಗಿ, ಹದಿನೈದು ಪ್ರಶಸ್ತಿಗಳನ್ನು ಪಡೆದುಕೊಂಡ ಹೆಗ್ಗಳಿಕೆ ಈ ಫೀಚರ್ ಫಿಲಂಗಿದೆ. ಇಂಡೋ ಫ್ರೆಂಚ್ ಫಿಲಂ ಫೆಸ್ಟಿವಲ್ ನಲ್ಲಿ ಈ ಕಿರುಚಿತ್ರದ ಪ್ರಧಾನ ಪಾತ್ರ ನಿರ್ವಹಿಸಿರುವ ತೇಜು ಬೆಳವಾಡಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ರೂಪಾ ರಾವ್ ಅವರಿಗೆ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಹಾಗೂ ಅತ್ಯುತ್ತಮ ಚಿತ್ರವಾಗಿಯೂ ಅಸ್ಮಿನ್ ಪ್ರಶಸ್ತಿ ಪಡೆದುಕೊಂಡಿದೆ. ಇಂಥಾ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಿಗೆ ಇಂಗ್ಲಿಶ್ ಮಿಶ್ರಿತ ಕನ್ನಡ ಚಿತ್ರವೊಂದು ಪ್ರವೇಶ ಪಡೆಯೋದೇ ಹೆಮ್ಮೆಯ ಸಂಗತಿ. ಅದೊಂದು ಸಾಹಸವೂ ಹೌದು. ಅದು ಅಸ್ಮಿನ್ ವಿಚಾರದಲ್ಲಿ ಸಾಧ್ಯವಾದದ್ದಕ್ಕೆ ಕಾರಣ ಅದರ ಗಟ್ಟಿತನ ಅನ್ನೋದನ್ನು ಬಿಡಿಸಿ ಹೇಳುವ ಅವಶ್ಯಕತೆಯಿಲ್ಲ. ಇಷ್ಟೆಲ್ಲ ಕೀರ್ತಿಗೆ ಪಾತ್ರವಾಗಿರುವ ಈ ಫೀಚರ್ ಫಿಲಂ ಎಲ್ಲರನ್ನು ಆವರಿಸಿಕೊಳ್ಳೋದರಲ್ಲಿಯೂ ಸಂದೇಹವೇನಿಲ್ಲ.

ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾದರೆ ಅದಕ್ಕೊಂದಷ್ಟು ಸೀಮಿತ ಚೌಕಟ್ಟುಗಳಿರುತ್ತವೆ. ಓಟಿಟಿ ಫ್ಲಾಟ್ ಫಾರ್ಮಿನಲ್ಲಿ ಬಿಡುಗಡೆಗೊಂಡರೂ ಒಂದಷ್ಟು ಮಿತಿಗಳಿರುತ್ತವೆ. ಇದರ ಕಂಟೆಂಟು ತುರ್ತಾಗಿ ಈ ಜನರೇಷನ್ನಿಗೆ ತಲುಪಲೇಬೇಕಾಗಿವಂಥಾದ್ದು. ಅದು ವಿಶ್ವಾದ್ಯಂತ ಹೆಚ್ಚು ಮಂದಿಗೆ ತಲುಪಬೇಕೆಂಬ ಆಕಾಂಕ್ಷೆಯಿಂದಲೇ ಚಿತ್ರತಂಡ ಈ ಫೀಚರ್ ಫಿಲಂ ಅನ್ನು ಯೂಟ್ಯೂಬ್ ಮೂಲಕ ಬಿಡುಗಡೆಗೊಳಿಸಿದೆ. ಅದಕ್ಕೆ ಆರಂಭಿಕವಾಗಿಯೇ ನೋಡುಗರ ಕಡೆಯಿಂದ ವ್ಯಾಪಕ ಬೆಂಬಲ ಸಿಗಲಾರಂಭಿಸಿರೋದು ಒಂದಿಡೀ ತಂಡದ ಹುರುಪು ಹೆಚ್ಚಿಸಿದೆ. ಸಾಮಾನ್ಯವಾಗಿ ಬಹುತೇಕ ಕಥೆಗಳು ನಿರ್ದಿಷ್ಟ ಕಾಲಾವಧಿಯಲ್ಲಿ ದೃಷ್ಯರೂಪ ಧರಿಸುತ್ತವೆ. ಆದರೆ, ಎಲ್ಲಾ ಕಥೆಗಳನ್ನೂ ಎರಡು ಗಂಟೆಯ ಕಾಲಾವಧಿಯಲ್ಲೇ ಹೇಳಬೇಕೆಂದೇನೂ ಇಲ್ಲ. ಅಂಥಾದ್ದೊಂದು ಚೌಕಟ್ಟನ್ನು ಮೀರುವ ಮನಃಸ್ಥಿತಿ ಹೊಂದಿರುವ ರೂಪಾ ರಾವ್ ಭಿನ್ನವಾದೊಂದು ಕಥೆಯನ್ನು ನಲವತೈದು ನಿಮಿಷಗಳ ಕಾಲಾವಧಿಯಲ್ಲಿ ದೃಶ್ಯೀಕರಿಸಿದ್ದಾರೆ. ಅವಧಿ ಎಷ್ಟೇ ಇದ್ದರೂ, ಕಥೆಯ ಆಂತರ್ಯ ಎಂಥಾದ್ದೇ ಇದ್ದರೂ, ನೋಡುಗರಿಗೆ ಥಿಯೇಟ್ರಿಕಲ್ ಫೀಲ್ ಕೊಡುವಂತೆ ದೃಶ ಕಟ್ಟುವುದು ರೂಪಾ ರಾವ್ ಅವರ ಮೊದಲ ಆದ್ಯತೆ. ಅಂಥಾ ಪ್ರೀತಿ, ಆಸ್ಥೆಯಿಂದ ಅವರು ಅಸ್ಮಿನ್ ಅನ್ನು ರೂಪಿಸಿದ್ದಾರೆ.

ಹೇಳಿಕೇಳಿ ರೂಪಾರಾವ್ ವಿಶೇಷವಾದ ಕಥನಗಳನ್ನೇ ಮುಟ್ಟುವ ಸ್ವಭಾವ ಹೊಂದಿರುವ ನಿರ್ದೇಶಕಿ. ಸಿದ್ಧಸೂತ್ರಗಳಾಚೆ ದೃಶ್ಯ ಕಟ್ಟುತ್ತಲೇ ಏಕತಾನತೆಯನ್ನು ಮೀರಿಕೊಳ್ಳುವ ಕುಸುರಿ ಕಲೆ ಅವರ ನಿರ್ದೇಶನದ ಅಸಲೀ ಶಕ್ತಿ. ಅದು ಅಸ್ಮಿನ್ ಚಿತ್ರದ ಮೂಲಕ ಮತ್ತೆ ಸಾಬೀತಾಗಿದೆ. ತೇಜು ಬೆಳವಾಡಿ ಇಲ್ಲಿ ಮನು ಎಂಬ ಪಾತ್ರವನ್ನು ಜೀವಿಸಿದ್ದಾರೆ. ಆಕೆ ಬೇರೊಂದು ಬಗೆಯ ನಟನಾ ಶೈಲಿಯ ಮೂಲಕ ನೋಡುಗರನ್ನು ಆವರಿಸಿಕೊಳ್ಳುತ್ತಾರೆ. ಆಕೆಯ ಡಾಕ್ಟರ್ ನೀಲಿಮಾ ಪಾತ್ರಕ್ಕೆ ಶ್ವೇತಾ ಗುಪ್ತ ಜೀವ ತುಂಬಿದ್ದಾರೆ. ನವೀನ್, ನಾಗರಾಜ್, ಆರವ್, ಸತೀಶ್ ಕುಮಾರ್, ಶ್ರೀನಿವಾಸ್, ಪ್ರತಿಮಾ ವಜ್ರ, ರಾಮ್ ಮಂಜುನಾಥ್, ಪೃಥ್ವಿ ಬನವಾಸಿ, ಶ್ರೀನಿವಾಸ್ ಮುಂತಾದವರ ತಾರಾಗಣವಿದೆ. ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ರೂಪಾ ರಾವ್ ಮತ್ತು ಸಹದೇವ್ ಕೆಲವಡಿ ನಿರ್ಮಾಣ ಮಾಡಿದ್ದಾರೆ. ಮೋಹನ್ ಪ್ರಶಾಂತ್ ಎ ಛಾಯಾಗ್ರಹಣ, ಸ್ನೇಹ ಮೆನನ್ ಸಂಕಲನ, ಅಪರಾಜಿತ್ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ರೂಪಾ ರಾವ್ ಅವರ ಯೂಟ್ಯೂಬ್ ಚಾನೆಲ್ಲಿನಲ್ಲಿ ಬಿಡುಗಡೆಗೊಂಡಿರೋ ಈ ಫೀಚರ್ ಫಿಲಂ ಅನ್ನೊಮ್ಮೆ ನೋಡಿದರೆ, ಖಂಡಿತಾ ವಿಶಿಷ್ಟ ಅನುಭೂತಿಯೊಂದು ಮನಸನ್ನಾವರಿಸಿಕೊಳ್ಳುತ್ತೆ.

 

 

Share this post:

Related Posts

To Subscribe to our News Letter.

Translate »