Left Ad
ಅರಸಯ್ಯನ ಪ್ರೇಮಪ್ರಸಂಗ: ಹಳ್ಳಿಯ ಹಾಸ್ಯ–ಪ್ರೀತಿಯ ಸಿಹಿ ಕಥೆ - Chittara news
# Tags

ಅರಸಯ್ಯನ ಪ್ರೇಮಪ್ರಸಂಗ: ಹಳ್ಳಿಯ ಹಾಸ್ಯ–ಪ್ರೀತಿಯ ಸಿಹಿ ಕಥೆ

ಹಳ್ಳಿ ಜೀವನದ ಸರಳತೆ, ಗೆಳೆತನ, ಪ್ರೀತಿ, ಒದ್ದಾಟ–ಪರದಾಟಗಳ ನಡುವೆ ಹಾಸ್ಯ ತುಂಬಿಕೊಂಡು ಬಂದಿರುವ ಸಿನಿಮಾ ‘ಅರಸಯ್ಯನ ಪ್ರೇಮಪ್ರಸಂಗ’.

ಕಥೆಯ ಕೇಂದ್ರ ಪಾತ್ರ ಅರಸಯ್ಯ (ಮಹಾಂತೇಶ್ ಹಿರೇಮಠ) – ಮಠದ ದೇವಾಲಯದ ಪೂಜಾರಿ ಹಾಗೂ ಊರಿನ ಹಬ್ಬ-ಸಂಭ್ರಮಗಳಲ್ಲಿ ಸಕ್ರಿಯ. ಮದುವೆ ವಯಸ್ಸಾದರೂ ಸೂಕ್ತವಾದ ಹುಡುಗಿಯನ್ನು ಹುಡುಕುವ ಅಪ್ಪ-ಅಮ್ಮನ ಒತ್ತಡದಲ್ಲಿ ಇರುವ ಅವನಿಗೆ, ಪೋಸ್ಟ್ ಆಫೀಸ್‌ನಲ್ಲಿ ಕೆಲಸ ಮಾಡುವ ಕುಮಾರಿ (ರಶ್ಮಿಕ ಆರ್. ಗೌಡ) ಮೇಲೆ ಪ್ರೀತಿ ಮೂಡುತ್ತದೆ. ಗೆಳೆಯ ಬಸವ (ಪಿ.ಡಿ. ಸತೀಶ್) ಸದಾ ಬೆಂಬಲ ನೀಡುತ್ತಾನೆ.

ಮೊದಲ ನೋಟದಲ್ಲೇ ಮನಸೋತ ಅರಸಯ್ಯ, ಕುಮಾರಿಯ ಪ್ರೀತಿಯನ್ನು ಗೆಲ್ಲಲು ಹರಸಾಹಸ ಮಾಡುತ್ತಾನೆ. ಕುಟುಂಬಗಳು ಮದುವೆಗೆ ಒಪ್ಪುತ್ತವೆ. ಆದರೆ ಅಚಾನಕ್‌ ಒಂದು ದೋಷ ಅವರ ಸಂಬಂಧಕ್ಕೆ ಅಡ್ಡಿಯಾಗಿ, ಕಥೆಯನ್ನು ಕುತೂಹಲದ ತಿರುವಿಗೆ ಕೊಂಡೊಯ್ಯುತ್ತದೆ. ಕೊನೆಗೆ ಇಬ್ಬರು ಒಂದಾಗುತ್ತಾರಾ? ಅಥವಾ ಪ್ರೀತಿ ವಿಫಲವಾಗುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರ ಕ್ಲೈಮ್ಯಾಕ್ಸ್‌ನಲ್ಲಿ ಸಿಗುತ್ತದೆ.

ಚಿತ್ರದ ಕಥಾವಸ್ತು ಹಳ್ಳಿಯ ನೈಜ ಬದುಕಿನಿಂದ ಪ್ರೇರಿತವಾಗಿದ್ದು, ಹಾಸ್ಯ ಮತ್ತು ಭಾವನಾತ್ಮಕತೆ ಚೆನ್ನಾಗಿ ಬೆರೆಸಲಾಗಿದೆ. ಕೆಲವು ಭಾಗಗಳಲ್ಲಿ ಇನ್ನಷ್ಟು ವೇಗ, ಹೊಸತನ ಬೇಕಿತ್ತು ಎನ್ನಿಸಿದರೂ, ಮನರಂಜನೆ ಒದಗಿಸುವ ಪ್ರಯತ್ನ ಯಶಸ್ವಿಯಾಗಿದೆ.

ಮಹಾಂತೇಶ್ ಹಿರೇಮಠ ನಾಯಕನಾಗಿ ನೈಸರ್ಗಿಕ ಅಭಿನಯದ ಮೂಲಕ ಮನ ಸೆಳೆದಿದ್ದಾರೆ. ರಶ್ಮಿಕಾ ಆರ್. ಗೌಡ ಪಾತ್ರಕ್ಕೆ ನ್ಯಾಯ ನೀಡಿದ್ದಾರೆ. ಪಿ.ಡಿ. ಸತೀಶ್ ಮತ್ತು ಚಿಲ್ಲರ್ ಮಂಜು ಅವರ ಹಾಸ್ಯ ಸನ್ನಿವೇಶಗಳು ನೆನಪಿನಲ್ಲಿ ಉಳಿಯುತ್ತವೆ. ಉಳಿದ ಕಲಾವಿದರು ತಮ್ಮ ಪಾತ್ರಗಳಿಗೆ ಸರಿಯಾದ ಕೊಡುಗೆ ನೀಡಿದ್ದಾರೆ. ಛಾಯಾಗ್ರಹಣ ಆಕರ್ಷಕವಾಗಿದ್ದು, ಸಂಗೀತವೂ ಚಿತ್ರಕ್ಕೆ ಪೂರಕವಾಗಿದೆ.

ಒಟ್ಟಾರೆ, ‘ಅರಸಯ್ಯನ ಪ್ರೇಮಪ್ರಸಂಗ’ ಪ್ರೀತಿ, ಹಾಸ್ಯ ಮತ್ತು ಹಳ್ಳಿಯ ಜೀವನವನ್ನು ಮನರಂಜನೆಯಾಗಿ ತೋರಿಸಿದ ಸಿನಿಮಾ. ಕುಟುಂಬ ಸಮೇತರಾಗಿ ನೋಡುವಂತಿರುವ ಹಗುರ ಮನರಂಜನೆಯ ಚಿತ್ರ.

Spread the love
Translate »
Right Ad