ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಬಗ್ಗೆ ದಿನಕ್ಕೊಂದು ಸುದ್ದಿ ವೈರಲ್ ಆಗುತ್ತಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ.
‘KGF’ ಸರಣಿ ಬಳಿಕ ಯಶ್ ಯಾವ ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಕುತೂಹಲ ಹಲವರಲ್ಲಿ ಇತ್ತು. ಕಳೆದ ತಿಂಗಳು ಆ ಕುತೂಹಲಕ್ಕೆ ರಾಕಿಂಗ್ ಸ್ಟಾರ್ ತೆರೆ ಎಳೆದಿದ್ದರು. ಸಣ್ಣ ಅಪ್ಡೇಟ್ ಕೇಳುತ್ತಿದ್ದವರಿಗೆ ಕ್ರೇಜಿ ನ್ಯೂಸ್ ಕೊಟ್ಟಿದ್ದರು. ನಿರ್ದೇಶಕಿ, ನಿರ್ಮಾಣ ಸಂಸ್ಥೆಯ ಜೊತೆಗೆ ಸಿನಿಮಾ ಟೈಟಲ್ ಕೂಡ ಘೋಷಿಸಿದ್ದರು.
‘ಟಾಕ್ಸಿಕ್’ ಸಿನಿಮಾ ಬಹಳ ಕುತೂಹಲ ಮೂಡಿಸಿದೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮುಂದಿನ ವರ್ಷ ಏಪ್ರಿಲ್ 10ರಂದು ಸಿನಿಮಾ ಬಿಡುಗಡೆ ಮಾಡುವುದಾಗಿಯೂ ಹೇಳಿದ್ದಾರೆ. ಡ್ರಗ್ಸ್ ಮಾಫಿಯಾ ಸುತ್ತಾ ಈ ಸಿನಿಮಾ ಕಥೆ ಸುತ್ತುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗಲಿದೆ.
ಈ ಸಿನಿಮಾದ ವಿಚಾರವಾಗಿ ಬಹಳಷ್ಟು ಕುತೂಹಲಕಾರಿ ವಿಚಾರಗಳು ಹರಿದಾಡುತ್ತಿವೆ. ಅದರಲ್ಲಿ ನಾಯಕಿಯರ ವಿಚಾರವೂ ಒಂದು. ಈ ಚಿತ್ರದಲ್ಲಿ ಮೂವರು ನಾಯಕಿಯರು ಎನ್ನುವ ಗುಸುಗುಸು ಶುರುವಾಗಿತ್ತು. ಅದರಲ್ಲಿ ಕರೀನಾ ಕಪೂರ್ ಒಬ್ಬರು ಎನ್ನಲಾಗಿತ್ತು.ಈಗ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಎಂಬ ಸುದ್ದಿಯನ್ನ ತೇಲಿ ಬಿಡಲಾಗಿದೆ. ಕರೀನಾ ಕಪೂರ್ ಜೊತೆ ಶ್ರುತಿ ಹಾಸನ್ ಕೂಡ ಕನ್ನಡದ ರಾಕಿ ಜೊತೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ.
ಇನ್ನೂ ಶ್ರುತಿ ಹಾಸನ್ ಕೇವಲ ನಾಯಕಿ ಅಷ್ಟೇ ಅಲ್ಲ ಗಾಯಕಿಯೂ ಹೌದು. 03 ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಟಾಕ್ಸಿಕ್ ಚಿತ್ರದ ಟೀಸರ್ ಗಾಗಿ ಶ್ರುತಿ ಹಾಸನ್ ತಮ್ಮ ಕಂಠವನ್ನು ನೀಡಿದ್ದರು. ಹೀಗಾಗಿಯೇ ಟಾಕ್ಸಿಕ್ ಚಿತ್ರದಲ್ಲಿ ಶ್ರುತಿ ಹಾಸನ್ ನಟಿಸುವುದು ಖಚಿತವೆನ್ನುವ ಅಭಿಪ್ರಾಯ ಸದ್ಯಕ್ಕೆ ವ್ಯಕ್ತವಾಗ್ತಿದೆ.