ಸಿನಿಮಾ ಕಲಾವಿದರು, ತಂತ್ರಜ್ಞರ ಸಂಭಾವನೆ ವಿಚಾರ ಸದಾ ಗುಟ್ಟಾಗಿಯೇ ಇರುತ್ತದೆ. ಕೋಟಿ ಕೋಟಿ ಸಂಭಾವನೆ ಪಡೆದರೂ ಅದನ್ನು ಸ್ಟಾರ್ ನಟ, ನಟಿಯರು ಬಹಿರಂಗವಾಗಿ ಹೇಳಿಕೊಳ್ಳಲ್ಲ. ಸಿನಿಮಾ ಗೆದ್ದರೆ ಸಹಜವಾಗಿಯೇ ಸಂಭಾವನೆ ಹೆಚ್ಚಿಸಿಕೊಳ್ಳುತ್ತಾರೆ. ಸೋತರೆ ತಗ್ಗಿಸಿಕೊಳ್ಳುತ್ತಾರೆ. ಒಟ್ಟಾರೆ ಸಂಭಾವನೆ ದೊಡ್ಡ ವಿಷಯವೇ ಸರಿ. ತಮಿಳು ನಟಿಯರಾದ ಅಂಜಲಿ ಹಾಗೂ ವರಲಕ್ಷ್ಮಿ ಶರತ್‌ಕುಮಾರ್ ಇದೀಗ ವೇದಿಕೆಯಲ್ಲೇ ತಮ್ಮ ಸಂಭಾವನೆ ಹೆಚ್ಚಿಸಿಕೊಂಡುಬಿಟ್ಟಿದ್ದಾರೆ.
ವಿಶಾಲ್ ನಟನೆಯ ‘ಮದಗಜ ರಾಜ’ ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಕಂಡು ತಕ್ಕಮಟ್ಟಿಗೆ ಸದ್ದು ಮಾಡಿತ್ತು. 12 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಸಿನಿಮಾ ಬಹಳ ತಡವಾಗಿ ಪ್ರೇಕ್ಷಕರ ಮುಂದೆ ಬಂದಿತ್ತು. ಚಿತ್ರದಲ್ಲಿ ವಿಶಾಲ್ ಜೊತೆ ಅಂಜಲಿ ಹಾಗೂ ವರಲಕ್ಷ್ಮಿ ಶರತ್‌ಕುಮಾರ್ ನಾಯಕಿಯರಾಗಿ ಮಿಂಚಿದ್ದರು.ಹೈದರಾಬಾದ್‌ನಲ್ಲಿ ಚಿತ್ರದ ಪ್ರೀ- ರಿಲೀಸ್ ಈವೆಂಟ್ ನಡೀತು. ನಾಯಕಿಯರಿಬ್ಬರು ಭಾಗಿ ಆಗಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಸಂಭಾವನೆ ವಿಚಾರವೂ ಚರ್ಚೆಗೆ ಬಂದಿದೆ. ಕೂಡಲೇ ನಿರ್ಮಾಪಕರ ಜೊತೆ ಮಾತನಾಡಿ ವೇದಿಕೆಯಲ್ಲೇ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ.
ಇದು 12 ವರ್ಷಗಳ ಹಿಂದೆ ಮಾಡಿದ್ದ ಸಿನಿಮಾ. ಈಗ ನಿಮ್ಮಬ್ಬರ ಕರಿಯರ್ ಉತ್ತುಂಗದಲ್ಲಿದೆ. ಹಾಗಾಗಿ ಈಗ ಈ ಚಿತ್ರಕ್ಕೆ ಸಂಭಾವನೆ ಹೆಚ್ಚಿಸಿಕೊಂಡಿದ್ದೀರಾ? ಎಂದು ಪತ್ರಕರ್ತರೊಬ್ಬರು ಕೇಳಿದ್ದಾರೆ. ಕೂಡಲೇ ಪ್ರತಿಕ್ರಿಯಿಸಿದ ಇಬ್ಬರೂ “ಅಲ್ಲೇ ಇದ್ದ ನಿರ್ಮಾಪಕರ ಬಳಿ ಸಾರ್ ಹೇಳಿ ಸಂಭಾವನೆ ಹೆಚ್ಚಿಸುತ್ತೀರಾ? ಎಂದು ಹೇಳಿದ್ದಾರೆ. ಉತ್ತರಿಸಿದ ನಿರ್ಮಾಪಕರು ಸಿನಿಮಾ ಗೆದ್ದರೆ ಖಂಡಿತ ಕೊಡುತ್ತೀನಿ ಎಂದಿದ್ದಾರೆ.ಈ ಸಂಭಾಷಣೆ ನೋಡಿದ ನೆಟ್ಟಿಗರು ವೇದಿಕೆಯಲ್ಲೇ ನಟಿರಿಬ್ಬರು ತಮ್ಮ ಸಂಭಾವನೆ ಹೆಚ್ಚಿಸಿಕೊಂಡುಬಿಟ್ಟರು ಎಂದು ಕಾಮೆಂಟ್ ಮಾಡುತ್ತಿದ್ದಾರೆ.