ಚಿತ್ರ : ಇಂಟರ್ವಲ್
ನಿರ್ದೇಶಕ : ಭರತವರ್ಷ್
ನಿರ್ಮಾಣ : ಭರತವರ್ಷ್ ಪಿಚ್ಚರ್ಸ್
ಸಂಗೀತ : ವಿಕಾಸ್ ವಸಿಷ್ಠ
ಛಾಯಾಗ್ರಹಣ:ರಾಜ್ ಕಾಂತ್
ರೇಟಿಂಗ್ : 3/5
ಹಚ್ಚ ಹಸಿರನ್ನು ಹೊದ್ದುಕೊಂಡ ಮಲೆನಾಡಿದ ಗುಡ್ಡಕೊಪ್ಪ ಎಂಬ ಹಳ್ಳಿ, ಅಲ್ಲಿ ಒಂದೇ ಹೆಸರನ್ನಿಟ್ಟುಕೊಂಡ ಮೂವರು ಬಿಸಿರಕ್ತದ ಯುವಕರು.. ಅಲ್ಲೊಂದು ನಿಸ್ವಾರ್ಥ ಪ್ರೇಮ. ಪ್ರೇಮ ಮತ್ತು ಬದುಕನ್ನು ಕಟ್ಟಿಕೊಳ್ಳುವ ನಡುವಿನ ಮನ ಮುಟ್ಟುವ ಕಥೆ ಹೊತ್ತ ಚಿತ್ರವೇ `ಇಂಟರ್‌ವಲ್’. ಒಬ್ಬ ಗಣೇಶ್ ಎಸ್ (ಶಶಿ), ಇನ್ನೊಬ್ಬ ಗಣೇಶ್ ಯು (ಪ್ರಜ್ವಲ್) ಮತ್ತೊಬ್ಬ ಗಣೇಶ್.ಟಿ (ಸುಕೇಶ್) ಈ ಮಾವರೂ ಚಡ್ಡಿದೋಸ್ತ್ಗಳು, ಕಾಲೇಜ್‌ನಲ್ಲೂ ಕುಚುಕುಗಳೇ ಆಗಿರುತ್ತಾರೆ. ಬಾಲ್ಯದ ಚೇಸ್ಟೇಗಳು ಕಾಲೇಜಿನಲ್ಲೂ ಮುಂದುವರಿದಿರುತ್ತದೆ. ಇಂಜಿನಿಯರ್‌ನಲ್ಲಿ ನಾಪಾಸಾದರೂ, ಪಾಸು ಎಂಬ ಬಿಲ್ಡ್ಅಪ್ ಕೊಟ್ಟುಕೊಂಡು `ವೇಸ್ಟ್ಬಾಡಿ’ಗಳ ಥರ ಮೂವರೂ ತಿರುಗಾಡಿಕೊಂಡಿರುತ್ತಾರೆ. ಮುಗ್ಧರನ್ನು ಯಾಮಾರಿಸಿ ಆ ದುಡ್ಡಿನಲ್ಲಿ ಎಣ್ಣೆ-ದಮ್ಮು ಅಂತ ಮಜಾ ಮಾಡುತ್ತಾ, ಮನೆಮಂದಿಯ ದೃಷ್ಟಿಯಲ್ಲಿ ಕಸವಾಗಿ ಬಿಡುತ್ತಾರೆ.
ಲೋಕಲ್ ಲೀಡರ್‌ಗಳ ಜೊತೆ ಲೋಕಲ್ ಪೊಲಿಟಿಕ್ಸ್ ಮಾಡುತ್ತಾ, ಸೋಮಾರಿತನವನ್ನು ಮೈಗೂಡಿಸಿಕೊಂಡು.. ಚಟ ಒಂದನ್ನು ತಮ್ಮ ಜೊತೆ ಇಟ್ಟುಕೊಂಡು ಮೆನೆ-ಮಠದಿಂದ ದೂರಾಗುವ ಸಂದರ್ಭ ಎದುರಾಗುತ್ತದೆ. `ಮೂರು’ ಬಿಟ್ಟು ಬೆಂಗಳೂರು ಸೇರುವ, ಈ ತ್ರಿಮೂರ್ತಿಗಳು ಕೆಲಸಕ್ಕಾಗಿ ಪರದಾಡುತ್ತಾರೆ. ತಮ್ಮೂರಿಗೆ ತಾವೇನೆಂದು ತೋರಿಸಲು ಹೊರಟ ಮೂವರೂ ಬದುಕಲ್ಲಿ ಸೆಟ್ಲ್ ಆಗ್ತಾರಾ? ಕಿತ್ತೋದ ಪ್ರೇಮ ಕಥೆ ಎಲ್ಲಿಗೆ ಬಂದು ನಿಲ್ಲುತ್ತದೆ? ಬೈಕ್‌ನಲ್ಲಿ ತ್ರಿಬಲ್ ರೈಡ್‌ನಲ್ಲಿ ಮಹಾನಗರಿಗೆ ಕಾಲಿಟ್ಟವರು ಸಾಧಿಸುವ ಸಾಧನೆ ಏನು? ಈ ಎಲ್ಲಾ ಪ್ರಶ್ನೆಗಳ ಉತ್ತರಕ್ಕಾಗಿ “ಇಂರ್ಟವಲ್” ನೋಡಲೇಬೇಕು.
ಆರಂಭದಿ0ದ ಕೊನೆಯವರೆಗೂ ಸುಚುವೇಶನ್ ಕಾಮಿಡಿ ಮೂಲಕ ನಿರ್ದೇಶಕ ಭರತವರ್ಷ “ಇಂರ್ಟವಲ್”ನ್ನು `ಶುಭಂ’ವರೆಗೂ ಆಸಕ್ತಿಯಿಂದ ನೋಡುವಂತೆ ಮಾಡಿದ್ದಾರೆ. ಸೋಮಾರಿ ಹುಡುಗರ ಕಥೆಯಿಟ್ಟುಕೊಂಡು ಯಾಮಾರುವ ಸಾಧ್ಯತೆ ಇದ್ದರೂ, ಉತ್ತಮ ಸಂಭಾಷಣೆ, ನಿರೂಪಣೆ, ಅಭಿನಯದ ಮೂಲಕ ಚಿತ್ರತಂಡ ಗೆದ್ದಿದೆ. ಶಶಿ, ಪ್ರಜ್ವಲ್ ಮತ್ತು ಸುಕೇಶ್ ಮೂವರ ಕಾಮಿಡಿ ಟೈಮಿಂಗ್, ಡೈಲಾಗ್ ಡೆಲಿವರಿ, ನಟನೆ ಎಲ್ಲವೂ ಫ್ರೆಶ್ ಆಗಿದ್ದು ಒಂದು ಹೊಸ ಅನುಭವ ನೀಡುತ್ತದೆ. ಅದರಲ್ಲೂ ಸುಕೇಶ್ ಪಾತ್ರವನ್ನು ಸುಖಿಸಿಕೊಂಡು ನೀಡಿದ ಸಹಜ ಅಭಿನಯ ಸಾಕಷ್ಟು ಇಷ್ಟವಾಗುತ್ತದೆ. ನಟಿಯರಾದ ಚೈತ್ರರಾವ್ ಮತ್ತು ಸಹನ ಪಾತ್ರದಲ್ಲಿ ಜೀವಿಸಿದ್ದಾರೆ. ಇನ್ನು, ಹೊಸ ತಂಡಕ್ಕೆ ಹಿರಿಯ ಪತ್ರಿಕಾ ಸಂಪರ್ಕಾಧಿಕಾರಿ ನಾಗೇಂದ್ರ ಅವರ ಅನುಭವೀ ಮಾರ್ಗದರ್ಶನ ದೊಡ್ಡ ಪ್ಲಸ್‌ಪಾಯಿಂಟ್ ಆಗಿದೆ.
ತಂತ್ರಜ್ಞರ ವಿಚಾರಕ್ಕೆ ಬರೋದಾದ್ರೆ.. ರಾಜ್ ಕಾಂತ್ ಕ್ಯಾಮರಾ ಕಣ್ಣಲ್ಲಿ ಪ್ರಕೃತಿ ಅದ್ಭುತ, ವಿಕಾಸ್ ವಸಿಷ್ಟ ವಿಶಿಷ್ಟವಾದ ಸಂಗೀತ ನೀಡಿದ್ದು.. ಪ್ರಜ್ವಲ್ ಕತ್ತರಿ ಪ್ರಯೋಗ ಕಥೆಗೆ ಪೂರಕವಾಗಿದೆ. ಒಟ್ಟಿನಲ್ಲಿ ಕಂಟೆ0ಟ್ ಜೊತೆ ಕಾಮಿಡಿ ಸೇರಿಕೊಂಡು `ಇಂಟರ್‌ವಲ್’ ಒಂದು ಕುಟುಂಬ ಸಮೇತರಾಗಿ ನೋಡಿ ರಂಜಿಸುವ ಚಿತ್ರವಾಗಿ ಹೊಮ್ಮಿದೆ. ಬದುಕಿನ ಜಂಜಾಟದಲ್ಲಿ ಒಂದು `ಇಂಟರ್‌ವಲ್’ ತಗೊಂಡು ಸಿನಿಮಾ ನೊಡಿ.. ರಣ ಬಿಸಿಲಲ್ಲಿ ತಂಪು ಆಹ್ಲಾದಕರ ಮಜ್ಜಿಗೆ ಕುಡಿದಷ್ಟೇ ಹಿತವಾಗುತ್ತದೆ.