Sandalwood Leading OnlineMedia

ಸರಳ ಸ್ವಭಾವದ.. ಸಿನಿಮಾ ಪ್ರೇಮಿ ದೀಪಕ್‌ ಅರಸ್‌ : ಈ ಸಾವು ನ್ಯಾಯವೇ..?

ಜಗತ್ತಿನಲ್ಲಿ ಹುಟ್ಟಿದ ಯಾವ ಪ್ರಾಣಿಯೂ ಪರ್ಮನೆಂಟ್‌ ಆಗಿ ಜೀವಿಸುವುದಕ್ಕೆ ಸಾಧ್ಯವಿಲ್ಲ. ಒಂದಲ್ಲ ಒಂದು ದಿನ ಇದ್ದ ಊರು ಬಿಟ್ಟು ಗೊತ್ತಿಲ್ಲದ ಊರಿಗೆ ಹೊರಡಲೇಬೇಕು. ಹುಟ್ಟು ಉಚಿತ ಸಾವು ಖಚಿತ ಎಂಬ ಮಾತಿನಂತೆ. ಸಾವು ಯಾವಾಗ..? ಹೇಗೆ ಅರಸಿ ಬರುತ್ತದೆ ಎಂಬುದು ಯಾರಿಗೂ ಅರಿವಿರುವುದಿಲ್ಲ. ಒಮ್ಮೊಮ್ಮೆ ತುಂಬಾ ಆತ್ಮೀಯರಿಗೆ, ಸರಳ ಸಜ್ಜನ ಗುಣವಂತರಿಗೆ ಬರುವ ಸಾವುಗಳು ಈ ಸಾವು ನ್ಯಾಯವೇ ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿ ಬಿಡುತ್ತವೆ. ಈಗ ಕೆಲ ಆಪ್ತವಲಯದಲ್ಲಿ ದೀಪಕ್‌ ಅರಸ್‌ ಸಾವು ಕೂಡ ಈ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ದೀಪಕ್‌ ಅರಸ್‌ ಸಿನಿಮಾ ಪ್ರೇಮಿ. ಒಳ್ಳೊಳ್ಳೆ ಸಿನಿಮಾಗಳನ್ನು ಸಿನಿಪ್ರೇಮಿಗಳಿಗೆ ನೀಡಬೇಕೆಂದು ಮಿಡಿಯುತ್ತಿದ್ದ ಹೃದಯ ಅವರದ್ದು. ಒಂದೆರಡು ಸಿನಿಮಾಗಳನ್ನು ನಿರ್ದೇಶಿಸಿ ಹೆಸರು ಮಾಡಿದ್ದರು. ಮನಸಾಲಜಿ ಹಾಗೂ ಶುಗರ್‌ ಫ್ಯಾಕ್ಟರಿ ಎಂಬ ಸಿನಿಮಾಗಳು ಇವರ ನಿರ್ದೇಶನದಲ್ಲಿಯೇ ಮೂಡಿ ಬಂದಿದ್ದವು. ಸರಳ ಸಜ್ಜನಿಕೆ, ಮೃದು ಸ್ವಭಾವ ಎಂಬ ಮಾತುಗಳು ದೀಪಕ್‌ ಅರಸ್‌ ಅವರಿಗೆ ಬಹಳ ಪ್ರಿಯವಾಗಿ ಒಪ್ಪುತ್ತವೆ.

ದೀಪಕ್‌ ಅರಸ್‌ ತಂಗಿ ಅಮೂಲ್ಯ. ಚಿತ್ರರಂಗದಲ್ಲಿ ಸಾಕಷ್ಟು ಖ್ಯಾತಿ ಪಡೆದವರು, ಗೋಲ್ಡನ್‌ ಕ್ವೀನ್‌ ಆಗಿ ಮಿಂಚಿದವರು. ಈಗ ಆರ್‌ಆರ್‌ ನಗರದ ದೊಡ್ಡಮನೆಯ ಸೊಸೆಯಾಗಿದ್ದಾರೆ. ಆದರೆ ದೀಪಕ್‌ ಅವರು ಯಾವತ್ತಿಗೂ ತಂಗಿಯ ಹೆಸರನ್ನಾಗಲೀ, ಶ್ರೀಮಂತಿಕೆಯನ್ನಾಗಲಿ ತನ್ನ ಸಿನಿಮಾ ಪ್ಯಾಷನ್‌ಗೆ ಬಳಕೆ ಮಾಡಿಕೊಳ್ಳಲೇ ಇಲ್ಲ. ಅಂದಿನಿಂದ ಹೇಗಿದ್ದರೋ ಕೊನೆ ಗಳಿಗೆಯವರೆಗೂ ಅಷ್ಟೇ ಸಿಂಪಲ್‌ ಆಗಿ ಜೀವಿಸಿದವರು.

ಸಾವಿರಾರು ಕನಸುಗಳನ್ನು ಕಟ್ಟಿಕೊಂಡಿದ್ದ ದೀಪಕ್‌ ಅರಸ್‌ ಇಂದು ಎಲ್ಲರನ್ನು ಬಿಟ್ಟು ಹೊರಟಿದ್ದಾರೆ. ಹಲವು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಹೆಂಡತಿ, ಮಕ್ಕಳು, ಸಹೋದರ, ಸಹೋದರಿ, ತಾಯಿಯನ್ನು ಅಗಲಿದ್ದಾರೆ. ದೀಪಕ್‌ ಅವರ ಸಾವು ಕುಟುಂಬಕ್ಕೆ ಅರಗಿಸಿಕೊಳ್ಳಲಾಗದ ದುಃಖವಾಗಿದೆ.

ಚಿತ್ತಾರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶಿವಕುಮಾರ್‌ ಅವರಿಗೆ ದೀಪಕ್‌ ಅರಸ್‌ ಆತ್ಮೀಯವಾಗಿದ್ದರು. ಆರೋಗ್ಯದ ಸಮಸ್ಯೆ ಉಲ್ಭಣಗೊಳ್ಳುವುದಕ್ಕೂ ಮೊದಲು ಚಿತ್ತಾರ ಕಚೇರಿಗೆ ಬಂದಿದ್ದಂತ ದೀಪಕ್‌ ಅವರು, ಶಿವಕುಮಾರ್‌ ಅವರ ಬಳಿ ಮಾತನಾಡಿದ್ದರು. ಸಿನಿಮಾ ಬಗ್ಗೆ ಒಂದಷ್ಟು ಚರ್ಚೆ ಮಾಡಿದ್ದರು. ಅವರಿಗಿದ್ದ ಸಿನಿಮಾ ಮೇಲಿನ ಮೋಹ, ಅವರ ಸಾಫ್ಟ್‌ ನೇಚರ್‌ ಇದೆಲ್ಲವನ್ನು ಅರಿತಿದ್ದ ಶಿವಕುಮಾರ್‌ ಅವರಿಗೆ ದೀಪಕ್‌ ಅರಸ್‌ ಅವರ ಸಾವು ಶಾಕ್‌ ನೀಡಿದೆ. ಇಡೀ ಚಿತ್ತಾರ ಬಳಗದಿಂದ ಸಂತಾಪ ಸೂಚಿಸಿದ್ದು, ಅವರ ಕುಟುಂಬಕ್ಕೆ ಇಷ್ಟು ದೊಡ್ಡ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಹಾರೈಸುತ್ತಿದೆ.

Share this post:

Related Posts

To Subscribe to our News Letter.

Translate »