ಶುಭಾ ಪೂಂಜಾ, ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ರಜಿನಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ‘ಅಂಬುಜಾ’ ಸಿನಿಮಾ ಟೀಸರ್ ಹಾಗೂ ಲಿರಿಕಲ್ ವೀಡಿಯೋ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆಯುತ್ತಿದೆ. ನೈಜ ಘಟನೆ ಆಧಾರಿತ ಈ ಚಿತ್ರದ ಟೀಸರ್ ಕುತೂಹಲವನ್ನು ಹುಟ್ಟು ಹಾಕಿದ್ದು, ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ.
ಕ್ರೈಂ ಥ್ರಿಲ್ಲರ್ ಹಾರಾರ್ ಕಥಾಹಂದರ ಒಳಗೊಂಡ ಈ ಚಿತ್ರವನ್ನು ಕಾಶಿನಾಥ್ ಡಿ ಮಡಿವಾಳರ್ ನಿರ್ಮಾಣ ಮಾಡಿದ್ದು, ಮೊದಲ ಬಾರಿ ಸಿನಿಮಾ ನಿರ್ಮಾಣ ಸಾಹಸಕ್ಕೆ ಕೈ ಹಾಕಿರುವ ಇವರು ಚಿತ್ರಕ್ಕೆ ಕಥೆ, ಸಾಹಿತ್ಯ ಕೂಡ ಬರೆದಿದ್ದಾರೆ. ಶ್ರೀನಿ ಹನುಮಂತರಾಜು ಚಿತ್ರವನ್ನು ನಿರ್ದೇಶಿಸಿದ್ದು, ಕೆಲವು ದಿನಗಳ ನಂತರ ಸಿನಿಮಾ ಮಾಡಿದ್ದ ಇವರಿಗೆ ಇದು ಎರಡನೇ ಸಿನಿಮಾ.
ನಿರ್ದೇಶಕ ಶ್ರೀನಿ ಅವರ ಜೊತೆ ಈ ಹಿಂದೆ ಕೆಲವು ದಿನಗಳ ನಂತರ ಸಿನಿಮಾ ಮಾಡಿದ್ದೆ, ಇದೀಗ ಅವರ ನಿರ್ದೇಶನದಲ್ಲಿ ಕ್ರೈಂ ಥ್ರಿಲ್ಲರ್ ಹಾರಾರ್ ಸಿನಿಮಾ ಅಂಬುಜಾದಲ್ಲಿ ನಟಿಸುತ್ತಿದ್ದೇನೆ. ಚಿತ್ರದಲ್ಲಿ ಕ್ರೈಂ ರಿಪೋರ್ಟರ್ ಪಾತ್ರ ನಿರ್ವಹಿಸಿದ್ದೇನೆ. ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾ ಕೂಡ ಅಷ್ಟೇ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದ್ರು.
ನಟಿ ರಜಿನಿ ಮಾತನಾಡಿ ಸಿನಿಮಾ ತುಂಬಾ ವಿಶೇಷವಾಗಿದೆ ಹಾಗೆಯೇ ನನ್ನ ಪಾತ್ರ ಕೂಡ ಅಷ್ಟೇ ವಿಶೇಷವಾಗಿದೆ. ಲಂಬಾಣಿ ವೇಷ ಭೂಷಣ ಕಣ್ಣಿಗೆ ಹಬ್ಬ.ಚಿತ್ರೀಕರಣ ಸಮಯದಲ್ಲಿ ಅವರು ನಮ್ಮನ್ನು ಸ್ವೀಕರಿಸಿದ ರೀತಿ ಎಲ್ಲವೂ ತುಂಬಾ ಖುಷಿ ಕೊಟ್ಟಿದೆ. ಲಂಬಾಣಿ ಪಾತ್ರ ಅಂದಾಗ ನನಗೆ ಬಹಳ ಖುಷಿ ಆಯ್ತು. ಮೊದಲ ದಿನ ಲಂಬಾಣಿ ವೇಷ ಹಾಕಿಕೊಂಡಾಗ ತಲೆ ಎಲ್ಲ ತುಂಬಾ ನೋವಾಗುತ್ತಿತ್ತು. ಆಮೇಲೆ ಅಡ್ಜೆಜ್ಟ್ ಆಯ್ತು. ಸಿನಿಮಾದ ಹಾಡು ಕೂಡ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ತಮ್ಮ ಪಾತ್ರ ಹಾಗೂ ಹಾಡಿನ ಬಗ್ಗೆ ಸಂತಸ ಹಂಚಿಕೊಂಡ್ರು.
ಕಥೆ ಬರೆದಾಗ ಚೆನ್ನಾಗನ್ನಿಸಿತು, ಗೊತ್ತಿಲ್ಲದ ವಿಚಾರಗಳನ್ನು ಜನರಿಗೆ ಹೇಳಬೇಕು ಎನಿಸಿತು. ಅದಾದ ಮೇಲೆ ನಿರ್ದೇಶಕ ಶ್ರೀನಿ ಅವರ ಜೊತೆ ಮಾತನಾಡಿದಾಗ ಅವರು ಕೂಡ ಕಥೆ ತುಂಬಾ ಚೆನ್ನಾಗಿದೆ ಅಂದ್ರು. ಸಿನಿಮಾ ಮಾಡೋಣ ಎಂದು ನಿರ್ಧರಿಸಿದೆ. ಸಿನಿಮಾಗೆ ಬೇಕಾದ ಪಾತ್ರಗಳು ಸಿಗುತ್ತ ಹೋಯಿತು. ಫೈನಲಿ ಒಂದೊಳ್ಳೆ ಸಿನಿಮಾ ರೆಡಿಯಾಗಿದೆ. ಪ್ರೇಕ್ಷಕರು ನೋಡಿ ಹರಸಬೇಕು. ‘ಅಂಬುಜಾ’ ಪಕ್ಕ ಕಮರ್ಶಿಯಲ್ ಸಿನಿಮಾವಾಗಿದ್ರೂ ಕೂಡ ಮನೆಮಂದಿಯೆಲ್ಲ ಕುಳಿತು ನೋಡಬಹುದು ಎಂದು ಚಿತ್ರದ ನಿರ್ಮಾಪಕ ಕಾಶಿನಾಥ್ ಡಿ ಮಡಿವಾಳರ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ್ರು.
ಶುಭಾ ಪೂಂಜಾ, ಪದ್ಮಜಾ ರಾವ್, ರಜಿನಿ, ಕಾಮಿಡಿ ಕಿಲಾಡಿ ಗೋವಿಂದೇಗೌಡ, ಕಾಮಿಡಿ ಕಿಲಾಡಿ ನಿರ್ದೇಶಕ ಶರಣಯ್ಯ, ಪ್ರಿಯಾಂಕ ಕಾಮತ್, ಸಂದೇಶ್ ಶೆಟ್ಟಿ ಅಜ್ರಿ ಸೇರಿದಂತೆ ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ.ಬೆಂಗಳೂರು, ಗದಗ, ಉಡುಪಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಎಸ್ ಕೆ ಸಿನಿಮಾಸ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣವಾಗಿದ್ದು, ವಿಜಯ್ ಎಂ ಕುಮಾರ್ ಸಂಕಲನ, ಮುರಳೀಧರ್ ಎಂ ಛಾಯಾಗ್ರಹಣ, ಪ್ರಸನ್ನ ಕುಮಾರ್ ಎಂ ಎಸ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.