
ನಮ್ಮ ನಗರಗಳು ಸ್ವಚ್ಛವಾಗಿ, ಸುಂದರವಾಗಿ ಮತ್ತು ಆರೋಗ್ಯಕರವಾಗಿರುವುದರ ಹಿಂದೆ ಅದೆಷ್ಟೋ ಶ್ರಮಿಕರ ಬೆವರು ಮತ್ತು ತ್ಯಾಗ ಅಡಗಿದೆ. ಸೂರ್ಯೋದಯಕ್ಕೂ ಮುನ್ನವೇ ಎದ್ದು, ಬೆಳಗಿನ ಚಳಿಯಲ್ಲಿ, ಮಧ್ಯಾಹ್ನದ ಕಡು ಬಿಸಿಲಿನಲ್ಲಿ, ಮಳೆಯಲ್ಲೂ ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಜೀವಗಳೆಂದರೆ, ಅವರು ಪೌರ ಕಾರ್ಮಿಕರು. ನಾವು ತಿಂದು ಬಿಸಾಡುವ ಕಸ, ಚರಂಡಿಯಲ್ಲಿ ತುಂಬಿದ ಕೊಳೆ, ಬೀದಿಗಳಲ್ಲಿ ಚೆಲ್ಲಾಪಿಲ್ಲಿಯಾಗಿರುವ ತ್ಯಾಜ್ಯ ಎಲ್ಲವನ್ನೂ ಇವರು ಸ್ವಚ್ಛಗೊಳಿಸದಿದ್ದರೆ ನಮ್ಮ ನಗರಗಳ ಪರಿಸ್ಥಿತಿ ಏನಾಗುತ್ತಿತ್ತು? ಪೌರ ಕಾರ್ಮಿಕರ ಸ್ಥಿತಿಗತಿಗಳ ಕುರಿತು ಹೇಳಲು ಸಾಕಷ್ಟು ವಿವಾರಗಳಿವೆ.
ಸದ್ಯ ಪೌರಕಾರ್ಮಿಕರ ಬದುಕನ್ನು ಕಟ್ಟಿಕೊಡುವ ಸಿನಿಮಾವೊಂದು ಆರಂಭಗೊಂಡಿದೆ. ಅದು ‘ಗಾರ್ಡನ್’!
ಆರ್ಯ ಮಹೇಶ್ ನಿರ್ದೇಶನದಲ್ಲಿ, ಟಕ್ಕರ್ ಮನೋಜ್ ನಟನೆಯ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮೊನ್ನೆ ಗಣೇಶ ಹಬ್ಬದಂದು ಲೋಕಾರ್ಪಣೆಗೊಂಡಿದೆ. ಇದರಲ್ಲಿ ಹೀರೋ ಮುಖವನ್ನು ನೇರವಾಗಿ ಅನಾವರಣ ಮಾಡಿಲ್ಲ. ಬದಲಿಗರ ಕೈ ಮುಷ್ಟಿ ಹಿಡಿದು, ಹಿಮ್ಮುಖವಾಗಿ ನಿಂತಿರುವ ಸ್ಟಿಲ್, ಅದರ ಮೇಲೆ ಬಿಬಿಎಂಪಿ ಬಿಲ್ಡಿಂಗ್, ಬೆಂಗಳೂರು ಮಹಾನಗರ ಪಾಲಿಕೆ ಎನ್ನುವ ಮುದ್ರೆ ಮುಂತಾದ ಎಲಿಮೆಂಟುಗಳನ್ನು ಬಳಸಲಾಗಿದೆ. ಮೇಲ್ನೋಟಕ್ಕೆ ಇದು ಬೆಂಗಳೂರಿನ ಕಸ ವಿಲೇವಾರಿ ಮತ್ತು ಅದರ ಸುತ್ತಲಿನ ಮಾಫಿಯಾದ ಸುತ್ತ ಇರುವ ಕಥಾಹಂದರ ಎನ್ನುವುದು ಸ್ಪಷ್ಡವಾಗಿ ಗೊತ್ತಾಗುವಂತಿದೆ. ಸಿನಿಮಾಗೂ ಪೋಸ್ಟರಿಗೂ ಸಂಬಂಧವಿಲ್ಲದಂತೆ ವಿನ್ಯಾಸ ಮಾಡೋರ ನಡುವೆ, ಚಿತ್ರದ ಕಂಟೆಂಟ್ ಗೆ ಪೂರಕವಾಗಿ ಸೃಷ್ಟಿಸಿರುವ ಗಾರ್ಡನ್ ಪೋಸ್ಟರ್ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಎಂ.ಆರ್. ಸಿನಿಮಾಸ್ ಬ್ಯಾನರ್ ಮೂಲಕ ಜಿ. ಮುನಿರಾಜು ಗಾರ್ಡನ್ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಗಾಗಿ ಸಕಲ ತಯಾರಿಯೂ ನಡೆಯುತ್ತಿದೆ. ಬೆಂಗಳೂರಿನಲ್ಲಿ ಇದುವರೆಗೂ ಯಾರೂ ಕ್ಯಾಮೆರಾ ಇಡದ ಲೊಕೇಷನ್ನುಗಳನ್ನು ನಿರ್ದೇಶಕ ಆರ್ಯ ಮಹೇಶ್ ಗಾರ್ಡನ್ ಗಾಗಿ ಹುಡುಕಿಟ್ಟಿದ್ದಾರೆ!

