‘ಶ್ರೀರಸ್ತು ಶುಭಮಸ್ತು’, ‘ರಾಧಾ ರಮಣ’ ಧಾರಾವಾಹಿ ಖ್ಯಾತಿಯ ನಟಿ ಶ್ವೇತಾ ಪ್ರಸಾದ್. ‘ಕಳ್ಬೆಟ್ಟದ ದರೋಡೆಕೋರರು’ ಚಿತ್ರದ ಮೂಲಕ ಬೆಳ್ಳಿ ಪರದೆಯಲ್ಲೂ ಮಿಂಚಿದ್ದಾರೆ. ‘ರಾಧಾ ರಮಣ’ ಧಾರಾವಾಹಿ ಶ್ವೇತಾ ಅವರಿಗೆ ಅಪಾರ ಖ್ಯಾತಿಯನ್ನು ತಂದುಕೊಟ್ಟಿದೆ. ರಾಧಾ ಮಿಸ್ ಎಂದೇ ಚಿರಪರಿಚಿತರಾಗಿರುವ ಶ್ವೇತಾ ಪ್ರಸಾದ್ ಅವರನ್ನು ಇತ್ತೀಚೆಗೆ ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರ ಆಹ್ವಾನಿಸಿ ಆತಿಥ್ಯ ನೀಡಿದೆ.
ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರ ಪ್ರವಾಸೋಧ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಬೇರೆ ಬೇರೆ ದೇಶದ ಸೆಲೆಬ್ರಿಟಿಗಳನ್ನು ತನ್ನ ದೇಶಕ್ಕೆ ಆಹ್ವಾನಿಸುತ್ತಿದೆ. ಆರು ದಿನಗಳ ಕಾಲ ಸಕಲ ಸೌಕರ್ಯದ ಜೊತೆಗೆ ಸೌದಿ ಅರೇಬಿಯಾದ ಪ್ರವಾಸಿ ತಾಣಗಳನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಿದೆ. ನಟಿ ಶ್ವೇತಾ ಪ್ರಸಾದ್ ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರದ ಆಹ್ವಾನಕ್ಕೆ ಪಾತ್ರರಾಗಿದ್ದು, ಆರು ದಿನಗಳ ಸೌದಿ ಅರೇಬಿಯಾ ಪ್ರವಾಸ ಮುಗಿಸಿ ವಾಪಾಸ್ಸಾಗಿದ್ದಾರೆ. ಕರ್ನಾಟಕದಿಂದ ಈ ಆಹ್ವಾನಕ್ಕೆ ಪಾತ್ರರಾದವರಲ್ಲಿ ಶ್ವೇತಾ ಪ್ರಸಾದ್ ಮೊದಲಿಗರಾಗಿದ್ದಾರೆ.
ಈ ಬಗ್ಗೆ ಸಂತಸ ಹಂಚಿಕೊಂಡಿರುವ ಶ್ವೇತಾ ಪ್ರಸಾದ್ ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರದಿಂದ ಆಹ್ವಾನಿಸಲ್ಪಟ್ಟಿದ್ದು ಬಹಳ ಖುಷಿ ನೀಡಿದೆ. ಕರ್ನಾಟಕದಿಂದ ಈ ಆಹ್ವಾನಕ್ಕೆ ಪಾತ್ರಳಾದವರಲ್ಲಿ ಮೊದಲಿಗಳು ನಾನು. ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಅಲ್ಲಿನ ಪ್ರವಾಸೋಧ್ಯಮ ಪ್ರಾಧಿಕಾರ ಈ ಕೆಲಸ ಮಾಡುತ್ತಿದೆ. ಆರು ದಿನಗಳ ಕಾಲ ಸೌದಿ ಅರೇಬಿಯಾದಲ್ಲಿ ಕಳೆದ ದಿನಗಳು ಮರೆಯಲಾಗದು. ಒಂದು ಹೊಸ ಅನುಭವವನ್ನು ಈ ಪ್ರವಾಸ ನೀಡಿದೆ. ಅಲ್ಲಿನ ರಿಯಾದ್, ಅಲುಲಾ, ಜೆಡಾ ಮೂರು ಹೆಸರಾಂತ ನಗರಗಳಿಗೆ ಭೇಟಿ ನೀಡಲಾಯಿತು.
ರಿಯಾದ್ ನಲ್ಲಿ ಸೌದಿ ಅರೇಬಿಯಾದ ಅತಿ ಎತ್ತರದ ಕಟ್ಟಡ ಕಿಂಗ್ ಡಂ ಟವರ್ ಗೆ ಭೇಟಿ ನೀಡಲಾಯಿತು. ಇದಲ್ಲದೇ ಬುರ್ಜ್ ಖಲೀಫಾಗಿಂತ ಎತ್ತರದ ಕಟ್ಟಡವನ್ನು ಅವರು ನಿರ್ಮಿಸುತ್ತಿದ್ದಾರೆ. ಇದೆಲ್ಲವನ್ನು ಕಳೆದ ಮೂರು ವರ್ಷದಿಂದ ಅವರು ಮಾಡುತ್ತಿದ್ದಾರೆ. ಅವರ ಆಹಾರ, ಆತಿಥ್ಯ ಎಲ್ಲವೂ ತುಂಬಾ ಚೆನ್ನಾಗಿತ್ತು. ಟ್ರಾಫಿಕ್ ನಿಯಂತ್ರಣಕ್ಕೆ ದಿ ಲೈನ್ ಎಂಬ ಹೊಸ ಮಾರ್ಗಗಳನ್ನು ಕಂಡು ಕೊಂಡಿದ್ದಾರೆ. ಹೆಣ್ಣು ಮಕ್ಕಳು ಬುರ್ಖಾ ಧರಿಸುತ್ತಾರೆ, ಹೊರಗಡೆ ಓಡಾಡುವುದಿಲ್ಲ ಎಂದುಕೊಂಡಿದ್ದೆ ಆದ್ರೆ ಅಲ್ಲಿ ಬುರ್ಖಾವನ್ನು ನಿಷೇಧಿಸಲಾಗಿದೆ. ಹೆಣ್ಣು ಮಕ್ಕಳು ಆರಾಮಾಗಿ ಓಡಾಡಿಕೊಂಡು ಇದ್ದಾರೆ. ಜೊತೆಗೆ ಭಾರತೀಯರ ಮೇಲೆ ಅಲ್ಲಿನವರು ವಿಶೇಷವಾದ ಪ್ರೀತಿಯನ್ನು ಹೊಂದಿದ್ದಾರೆ ಎಂದು ಪ್ರವಾಸ ಸಂತಸದ ಅನುಭವವನ್ನು ಹಂಚಿಕೊಂಡಿದ್ದಾರೆ.
ಧಾರಾವಾಹಿಯಿಂದ ಕೊಂಚ ಬ್ರೇಕ್ ಪಡೆದುಕೊಂಡಿರುವ ಶ್ವೇತಾ ಪ್ರಸಾದ್ ಸದ್ಯ ‘ಅರಿಹ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.