ಜನುಮದ ಜೋಡಿಯ ಕನಕಳಿಗೆ ಇಂದು ಹುಟ್ಟುಹಬ್ಬದ ಸಂಭ್ರಮ
ತಮ್ಮ ನೆಚ್ಚಿನ ನಟಿಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶುಭಕೋರುತ್ತಿದ್ದಾರೆ. ನಟಿ ಶಿಲ್ಪಾ ಮೂಲತಃ ಕೇರಳದವರಾದರೂ ಇಡೀ ದಕ್ಷಿಣ ಭಾರತದಲ್ಲಿ ಅವರಿಗೆ ಅಭಿಮಾನಿಗಳಿದ್ದಾರೆ. ಮಲಯಾಳಂ ಮಾತ್ರವಲ್ಲದೆ ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲೂ ಹಲವು ಸಿನಿಮಾಗಳನ್ನು ಮಾಡಿರುವ ಅವರಿಗೆ ಇಂದು ಹುಟ್ಟುಹಬ್ಬ. ಅಭಿಮಾನಿಗಳ ವಲಯದಿಂದ ಅವರಿಗೆ ಶುಭಾಶಯಗಳು ಹರಿದುಬರುತ್ತಿವೆ.
90ರ ದಶಕದಲ್ಲಿ ಮಿಂಚಿದ ನಾಯಕಿ
90ರ ದಶಕದ ಆರಂಭದಲ್ಲಿ ಮಲಯಾಳಂ ಚಿತ್ರದ ಮೂಲಕ ನಟನೆ ಶುರು ಮಾಡಿ ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಮೆರೆದವರು ನಟಿ ಶಿಲ್ಪ. ಜನುಮದ ಜೋಡಿ ಸಿನಿಮಾದಲ್ಲಿ ಕನಕ ಪಾತ್ರದಲ್ಲಿ ಇವರ ಅಭಿನಯವನ್ನು ಕನ್ನಡ ಜನತೆ ಮರೆಯಲು ಸಾಧ್ಯವಿಲ್ಲ. ಮೂಲತಃ ಕೇರಳದವರಾದರು ಕರ್ನಾಟಕದಲ್ಲೇ ಹೆಚ್ಚು ಜನಪ್ರಿಯತೆ ಪಡೆದವರು ನಟಿ ಶಿಲ್ಪಾ. ಶಿಲ್ಪಾ ಅವರ ತಂದೆ ಹೆಸರು ಶಾಜಿ ಮತ್ತು ತಾಯಿಯ ಹೆಸರು ತಂಗಮ್. ಕೇರಳದ ತಿರುವನಂತಪುರಂನಲ್ಲಿ ಜನಿಸಿದರು. ಶಿಲ್ಪಾ ಅವರ ಮೂಲ ಹೆಸರು ಚಿಪ್ಪಿ. 1993 ರಲ್ಲಿ ಮಲಯಾಳಂ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ಭರತನ್ ಅವರು ನಿರ್ದೇಶಿಸಿದ ಪಧೇಯಮ್ ಸಿನಿಮಾ ಮೂಲಕ ನಟನೆ ಶುರು ಮಾಡಿದರು
.
ದಕ್ಷಿಣ ಭಾರತದ ಪ್ರಸಿದ್ಧ ನಟಿಯಾಗಿದ್ದ ಶಿಲ್ಪಾ ಮಲಯಾಳಂ, ತೆಲುಗು, ತಮಿಳು, ಕನ್ನಡ ಈ ಎಲ್ಲಾ ಭಾಷೆಗಳಲ್ಲೂ ನಟಿಸಿ ಎಲ್ಲಾ ಭಾಷೆಯ ಪ್ರೇಕ್ಷಕರನ್ನು ಮನರಂಜಿಸಿ ಮನೆ ಮಾತಾಗಿದ್ದಾರೆ. ಕನ್ನಡದಲ್ಲಿ ಸುಮಾರು 15 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸ್ಟಾರ್ ನಟರ ಜೊತೆ ಶಿಲ್ಪಾ ಮಿಂಚು
ಮಲೆಯಾಳಂ ಹಾಗೂ ತಮಿಳು-ತೆಲುಗಿನ ಸುಮಾರು ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಬಿ.ಸಿ ಪಾಟೀಲ್, ರಮೇಶ್ ಅರವಿಂದ್ ಹೀಗೆ ಇನ್ನು ಮುಂತಾದ ನಾಯಕ ನಟರ ಜೊತೆ ಶಿಲ್ಪಾರವರು ನಟಿಸಿದ್ದಾರೆ. ಕನ್ನಡದಲ್ಲಿ ಭೂಮಿ ತಾಯಿಯ ಚೊಚ್ಚಲ ಮಗ, ಇದು ಎಂಥಾ ಪ್ರೇಮವಯ್ಯ, ಮುಂಗಾರಿನ ಮಿಂಚು, ಕಲ್ಯಾಣಿ, ಜನುಮದ ಜೋಡಿ, ಲಕ್ಷ್ಮಿ ಮಹಾಲಕ್ಷ್ಮಿ, ಸುವಿ ಸುವಾಲಿ, ಮೇಘ ಬಂತು ಮೇಘಾ, ಅರುಣೋದಯ, ಧರ್ಮದೇವತೆ ತಮಿಳಿನಲ್ಲಿ ಧರ್ಮ ತೆಲುಗಿನಲ್ಲಿ ಪೆಳ್ಳಿ ಪೀತಾಲು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕನ್ನಡ ತೆರೆಯ ಮೇಲೆ ಮಿಂಚಿ ನಂತರ ತೆರೆಯಿಂದ ದೂರ ಸರಿದ ಅದ್ಬುತ ನಟಿಯರಲ್ಲಿ ಇವರೂ ಒಬ್ಬರು. ಕನ್ನಡದ ಸಿನಿ ರಸಿಕರು ಎಂದೂ ಮರೆಯದ ನಟಿಯರಲ್ಲಿ ಸಿಗುವ ಅಪರೂಪದ ನಟಿ ಶಿಲ್ಪಾ ಅವರು.. 1996 ರಲ್ಲಿ ಜನುಮದ ಜೋಡಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಜನುಮದ ಜೋಡಿ ಸಿನಿಮಾದಲ್ಲಿ ಶಿಲ್ಪಾ ಅವರ ಅಭಿನಯ ಮನೋಜ್ಞವಾಗಿತ್ತು, ಫಿಲ್ಮ್ ಫೇರ್ ಮತ್ತು ಕರ್ನಾಟಕ ಸ್ಟೇಟ್ ಅವಾರ್ಡ್ ಪಡೆದಿದ್ದರು.
ಇನ್ನು ಶಿಲ್ಪಾ ಅವರ ವೈಯಕ್ತಿಕ ಜೀವನದ ವಿಷಯಕ್ಕೆ ಬರುವುದಾದರೆ 2001 ರಲ್ಲಿ ಮಲಯಾಳಂ ಚಿತ್ರರಂಗದ ಪ್ರಸಿದ್ದ ಪ್ರೊಡ್ಯೂಸರ್ ರಂಜಿತ್ ಅವರೊಡನೆ ವಿವಾಹವಾದರು. ಶಿಲ್ಪಾ ಅವರಿಗೆ ಆವಂತಿಕ ಹೆಸರಿನ ಮುದ್ದಾದ ಮಗಳಿದ್ದಾಳೆ.