ಹಿರಿಯ ನಟಿ ಪುಷ್ಪಲತಾ ನಿಧನರಾಗಿದ್ದಾರೆ. 87 ವರ್ಷದ ನಟಿ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದರು. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಚೆನ್ನೈನ ಟಿ. ನಗರದ ತಿರುಮಲ ಪಿಳ್ಳೈ ರಸ್ತೆಯಲ್ಲಿರುವ ನಿವಾಸದಲ್ಲಿದ್ದ ನಟಿಗೆ ಏಕಾಏಕಿ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪುಷ್ಪಲತಾ ಅವರು 1958 ರಲ್ಲಿ ಬಿಡುಗಡೆಯಾದ ‘ಸೆಂಗೊಟ್ಟೈ ಸಿಂಗಂ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದರು. 1961ರಲ್ಲಿ ಗುನಾಟ್ಟು ತಂಗಮ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ನಟ ಎವಿಎಂ ರಾಜನ್ ಜೊತೆ ನಾನುಮ್ ಒರು ಪೆಣ್ ಚಿತ್ರದಲ್ಲಿ ನಟಿಸಿದ್ದರು. ಈ ಅವಧಿಯಲ್ಲಿ ಇಬ್ಬರು ಸ್ನೇಹಿತರಾಗಿದ್ದರು. ನಂತರ ಮದುವೆಯಾದರು. ಇಬ್ಬರು ಮಕ್ಕಳಿದ್ದಾರೆ. ಪುಷ್ಪಲತಾ ಅನೇಕ ತೆಲುಗು ಚಿತ್ರಗಳಲ್ಲೂ ನಟಿಸಿದ್ದಾರೆ. ಪೆದ್ದಕೊಡುಕು, ಅನ್ನದಮ್ಮುಲ್ ಅಫಿಲಿಯೇಶನ್, ಯುಗಪುರುಷುಡು, ರಾಜಪುತ್ರ ರಹಸ್ಯಂ, ಶ್ರೀರಾಮ ಪಟ್ಟಾಭಿಷೇಕಂ, ಮತ್ತು ಕೊಂಡವೀಟಿ ಸಿಂಹಂ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಮಾತ್ರವಲ್ಲ, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಸೇರಿ ಒಟ್ಟು 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು.
ಡಾ. ರಾಜ್‌ಕುಮಾರ್ ನಟನೆಯ ‘ಎರಡು ಕನಸು’ ಚಿತ್ರದಲ್ಲಿ ಕೂಡ ಪುಷ್ಪಲತಾ ಬಣ್ಣ ಹಚ್ಚಿದ್ದರು.ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಹುಟ್ಟಿ ಬೆಳೆದ ಪುಷ್ಪಲತಾ ಚಿಕ್ಕಂದಿನಲ್ಲೇ ಭರತನಾಟ್ಯ ಕಲಿತರು. ‘ನಲ್ಲ ತಂಗೈ’ ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಬಳಿಕ ‘ಕೊಂಗ ನಾಟು ತಂಗಂ’ ಚಿತ್ರದ ಮೂಲಕ ಮತ್ತೆ ನಟನೆ ಆರಂಭಿಸಿದ್ದರು. 50ರ ದಶಕದಲ್ಲೇ ಪುಷ್ಪಲತಾ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದರು. 5 ದಶಕಗಳ ಕಾಲ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದರು.