ಕನ್ನಡ ಚಿತ್ರರಂಗದ “ಕನಸಿನ ರಾಣಿ’ಯಾಗಿ ಸಿನಿಪ್ರಿಯರ ಮನಗೆದ್ದಿದ್ದ ನಟಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ಈಗ ನಾಯಕ ನಟಿಯಾಗಿ ಸ್ಯಾಂಡಲ್‌ವುಡ್‌ಗೆ ಅಡಿಯಿಡುತ್ತಿದ್ದಾರೆ.
ಮಾಲಾಶ್ರೀ ಹಾಗೂ ನಿರ್ಮಾಪಕ ರಾಮು ಪುತ್ರಿ ಅನನ್ಯಾ ಈಗ ರಾಧನಾ ರಾಮ್ ಎಂಬ ಹೆಸರಿನಲ್ಲಿ ಹೀರೋಯಿನ್ ಆಗಿ ಎಂಟ್ರಿಯಾಗಲು ರೆಡಿಯಾಗಿದ್ದು, ತಮ್ಮ ಮೊದಲ ಸಿನಿಮಾದಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ನಾಯಕಿಯಾಗಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಖ್ಯಾತ ನಿರ್ಮಾಪಕ ದಿವಂಗತ ರಾಮುರವರ ಪುತ್ರಿ ದರ್ಶನ್ ಜೊತೆಗೆ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಡುತ್ತಿರುವುದು ವಿಶೇಷವಾಗಿದೆ.
ವರಮಹಾಲಕ್ಷ್ಮೀ ಹಬ್ಬದ ದಿನದಂದೇ ರಾಧನಾ ರಾಮ್ ಅವರ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ, ಅಧಿಕೃತವಾಗಿ ನಾಯಕಿಯ ಹೆಸರನ್ನು ಘೋಷಿಸಿದೆ. ಇನ್ನು ಮೊದಲಿನಿಂದಲೂ ಅಭಿನಯದ ಕಡೆಗೆ ಆಸಕ್ತಿ ಬೆಳೆಸಿಕೊಂಡಿರುವ ರಾಧನಾ ರಾಮ್, ಕಳೆದ ನಾಲ್ಕೈದು ವರ್ಷಗಳಿಂದ ಹೀರೋಯಿನ್ ಆಗಲು ಬೇಕಾದ ತಯಾರಿಯನ್ನು ಮಾಡಿಕೊಂಡಿದ್ದಾರೆ. ಸುಮಾರು ಎರಡು ವರ್ಷಗಳಿಂದ ಮುಂಬೈನಲ್ಲಿ ಅಭಿನಯ ತರಬೇತಿಯನ್ನೂ ಪಡೆದುಕೊಂಡ ರಾಧನಾ ರಾಮ್, ಈಗ ಹೀರೋಯಿನ್ ಆಗಿ ಪೂರ್ಣ ಪ್ರಮಾಣದಲ್ಲಿ ತೆರೆಮೇಲೆ ಬರುತ್ತಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವುದು ಹೊಸ ಅನುಭವ. ಇದುವರೆಗೆ ನನ್ನ ತಾಯಿ ಕ್ಯಾಮೆರಾ ಮುಂದೆ ಅಭಿನಯಿಸುತ್ತಿರುವುದನ್ನು ನೋಡಿದ್ದೆ, ಈಗ ನನ್ನ ಸರದಿ, ದರ್ಶನ್ ಸರ್ ಅವರ ಕಲಾಸಿಪಾಳ್ಯ ನಮ್ಮ ಹೋಮ್ ಬ್ಯಾನರ್ (ರಾಮು ಫಿಲಂಸ್) ಅಡಿಯಲ್ಲಿ ನಿರ್ಮಿಸಲಾಗಿದೆ ಮತ್ತು ನಾನು ಅವರ ಸಿನಿಮಾಗಳ ಅಭಿಮಾನಿ ಎಂದು ರಾಧನಾ ರಾಮ್ ತಿಳಿಸಿದ್ದಾರೆ.
ಡಿ56 ಚಿತ್ರಕ್ಕೆ ಸುಧಾಕರ್ ರಾಜ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಅವರ ಸಂಕಲನ, ಮಾಸ್ತಿ ಅವರ ಸಂಭಾಷಣೆ ಇದೆ. ಚಿತ್ರದ ಬಹುತೇಕ ಚಿತ್ರೀಕರಣ ಸೆಟ್ ನಲ್ಲೇ ನಡೆಯಲಿದ್ದು, ಬೆಂಗಳೂರಿನಲ್ಲೇ ಚಿತ್ರೀಕರಣ ಮುಂದುವರೆಯಲಿದೆ.