ಮಿನುಗುತಾರೆ ಕಲ್ಪನಾ ಎನಿಸಿ ಚಿತ್ರ ರಸಿಕರ ಮನಸ್ಸಿನಲ್ಲಿ ಅಚ್ಚಳಿಯದ ಪಾತ್ರಗಳನ್ನು ನಿರ್ವಹಿಸಿ ಜನಪ್ರಿಯತೆಯ ಉತ್ತುಂಗಕ್ಕೇರಿದ, ನಟಿ ಕಲ್ಪನಾ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನವರು. ಚಿತ್ರರಂಗವನ್ನು ಪ್ರವೇಶಿಸುವ ಮೊದಲು ಅವರ ಹೆಸರು ‘ಶರತ್ ಲತಾ’. 1943 ಜುಲೈ 18 ಶ್ರೀಯುತ ಎನ್.ಎಸ್.ಕೃಷ್ಣಮೂರ್ತಿ ಮತ್ತು ಎಂ.ಜಾನಕಮ್ಮನವರ ಪುತ್ರಿಯಾಗಿ ಜನಿಸಿದರು. 1963ರಲ್ಲಿ ಪಂತುಲುರವರ ‘ಸಾಕುಮಗಳು’ ಚಿತ್ರದಿಂದ ಆರಂಭವಾದ ಸಿನಿಮಾ ಪಯಣ 1978ರ ಶ್ರೀಯುತ ಜ್ಞಾನಪೀಠಿ ಶಿವರಾಮ ಕಾರಂತರ ನಿರ್ದೇಶನದ ‘ಮಲೆಯಮಕ್ಕಳು’ ರವರೆಗೂ 78 ಸಿನಿಮಾಗಳಲ್ಲಿ ಅಭಿನಯಿಸುವಂತೆ ಮಾಡಿತು.
ಇವರ ಮಾತೃ ಭಾಷೆ ತುಳು. ತಂದೆ ಕೃಷ್ಣಮೂರ್ತಿ, ತಾಯಿ ಜಾನಕಮ್ಮ. ಕಲ್ಪನಾ ಬಾಲ್ಯದಲ್ಲೇ ಕಲಾವಿದೆಯಾಗುವ ಕನಸು ಕಂಡವರು. ಅವರ ಕುಟುಂಬದಲ್ಲಿ ಯಾರೂ ಕಲಾವಿದರಿರಲಿಲ್ಲ. ಅಂತಹ ಕನಸಿಗೆ ಇಂಬು ನೀಡವವರೂ ಇರಲಿಲ್ಲ. ವೃತ್ತಿ ರಂಗಭೂಮಿಯಲ್ಲಿ ಸ್ತ್ರೀ ನಾಟಕ ಮಂಡಳಿಯ ಮೂಲಕ ರಂಗಭೂಮಿ ಪ್ರವೇಶಿಸಿ ಚಿತ್ರರಂಗದ ಮಿನುಗುತಾರೆ ಎನಿಸಿದ್ದ ಕಲ್ಪನಾ ಅಭಿನಯದ ಮೊದಲ ಕನ್ನಡ ಚಲನಚಿತ್ರ ಬಿ.ಆರ್. ಪಂತುಲು ನಿರ್ದೇಶನದಲ್ಲಿ ಬಂದ ಸಾಕು ಮಗಳು.
ಕಲ್ಪನಾಗೆ, ಹೈಸ್ಕೂಲಿನಲ್ಲಿದ್ದಾಗಲೇ ನಾಟಕಗಳತ್ತ ಆಸಕ್ತಿ. ಮುಖಕ್ಕೆ ಬಣ್ಣ ಬಳಿಸಿಕೊಳ್ಳುವ ಹಂಬಲ. ಬೆಳ್ಳಿಮೋಡ ಚಿತ್ರದ “ಬೆಳ್ಳಿಮೋಡದ ಅಂಚಿನಿಂದಾ ಓಡಿಬಂದಾ ಮಿನುಗುತಾರೆ” ಎಂಬ ಹಾಡೇ ನಟಿ ಕಲ್ಪನಾರವರಿಗೆ ‘ಮಿನುಗುತಾರೆ’ ಎಂಬ ಬಿರುದನ್ನು ನೀಡಿದ್ದು.
ಕನ್ನಡದ ೬೫ ಚಿತ್ರಗಳೂ ಸೇರಿದಂತೆ ಒಟ್ಟು ೭೪ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಕಲ್ಪನಾ. ಕಲ್ಯಾಣಕುಮಾರ್ ನಿರ್ಮಾಣದ “ಪೋಲೀಸನ ಮಗಳು” ಚಿತ್ರವು ಅರ್ಧದಲ್ಲಿಯೇ ಉಳಿಯಿತು,”ಬೆಳ್ಳಿಮೋಡ”, “ಹಣ್ಣೆಲೆ ಚಿಗುರಿದಾಗ”, “ಶರಪಂಜರ” ಚಲನ ಈ ಚಿತ್ರಗಳಲ್ಲಿನ ಅಭಿನಯಕ್ಕೆ ೩ ಸಲ ರಾಜ್ಯ ಸರ್ಕಾರದ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದಿದ್ದ ಕಲ್ಪನಾಗೆ ಪುಸ್ತಕ ಓದುವ ಹವ್ಯಾಸವೂ ಇತ್ತು.
1967 ರಲ್ಲಿ ಬಿಡುಗಡೆಯಾದ ಚಿತ್ರ ಬೆಳ್ಳಿಮೋಡ ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತು. ಬೆಳ್ಳಿ ಮೋಡ, ಗೆಜ್ಜೆ ಪೂಜೆ, ಶರಪಂಜರ, ಎರಡು ಕನಸು, ಗಂಧದ ಗುಡಿ ಮೊದಲಾದ ಚಲನಚಿತ್ರಗಳಲ್ಲಿ ಕಲ್ಪನಾ ಅತ್ಯಂತ ಉತ್ತಮವಾಗಿ ಅಭಿನಯಿಸಿದ್ದಾರೆ.
ಸುಮಾರು ಇಪ್ಪತ್ತೇಳು ಕನ್ನಡ ಚಿತ್ರಗಳಲ್ಲಿ ಬಹುಮುಖ ಪ್ರತಿಭೆಯಾಗಿ ಮಿಂಚಿದ ಮಿನುಗುತಾರೆ ತಮಿಳು ಭಾಷೆಯಲ್ಲೂ ಕಂಡರು ಅದರಲ್ಲಿ ಮುಖ್ಯವಾಗಿ “ಮಡ್ರಾಸ್ ಟು ಪಾಂಡಿಚರಿ” ಚಿತ್ರವು ಕಲ್ಪನಾ ಅವರನ್ನು ಯಶಸ್ಸಿನ ಶಿಖರವನ್ನೇರಿಸಿತು ಆ ಚಿತ್ರ ಹಿಂದಿ ಭಾಷೆಗೂ ರಿಮೇಕ್ ಆಗಿ ಅಮಿತಾಬ್ , ಅರುಣಾ ಇರಾನಿ ಮುಖ್ಯಭೂಮಿಕೆಯಲ್ಲಿ ತೆರೆಕಂಡು ಯಶಸ್ಸು ಗಳಿಸಿತು.
ಇಡೀ ಚಿತ್ರೋಧ್ಯಮದಲ್ಲಿ ಅತ್ಯುತ್ತಮ ಪ್ರತಿಭೆಯಾಗಿ, ಅವರ ಮಾತಿನ ಶೈಲಿ, ಚುರುಕು ಚಟುವಟಿಕೆ, ಅಸಾಂಪ್ರದಾಯಿಕ ಜೀವನ ಶೈಲಿ, ಅವರ ಉಡುಗೆ ತೊಡುಗೆ ಇನ್ನಷ್ಟು ಜನಪ್ರಿಯತೆ ತಂದುಕೊಟ್ಟವು. ಆ ಕಾಲದ (1965-1975)ಮಾಡ್ರನ್ ಉಡುಗೆಯನ್ನು ತೊಟ್ಟು ತನ್ನದೇ ಆದ ಟ್ರೆಂಡ್ ಹುಟ್ಟು ಹಾಕಿಕೊಂಡಾಕೆ , ದೊಡ್ಡ ದೊಡ್ಡ ಓಲೆಗಳು ಅದಕ್ಕೆ ಒಪ್ಪುವಂತಹ ದೊಡ್ಡ ದೊಡ್ಡ ಉಂಗುರಗಳು, ಗಿಡ್ಡ ಸೆರಗು, ಹಾರದಂತಹ ಸರಗಳು, ಗಿಡ್ಡ ಗಿಡ್ಡ ತೋಳಿನ ಬೌಸುಗಳನ್ನು ಧರಿಸಿ ತಮ್ಮದೇ ಆದ ಟ್ರೆಂಡ್ ಪ್ರಾರಂಭಿಸಿದರು.
ಈ ಚೆಲುವೆಯ ಅಭಿನಯ ಕಂಡು ಬೆರಗಾಗದವರಿಲ್ಲ. ಹಣ್ಣೆಲೆ ಚಿಗುರಿದಾಗ , ಶರಪಂಜರ , ಬೆಳ್ಳಿಮೋಡ ಚಿತ್ರಗಳಲ್ಲಿ ಅತ್ಯದ್ಭುತ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿಯನ್ನೂ ತಮ್ಮ ಮುಡಿಗೇರಿಸಿಕೊಂಡು ಕನ್ನಡ ಚಿತ್ರೋಧ್ಯಮದಲ್ಲಿ ರಾಣಿಯಂತೆ ಶೋಭಿಸಿದ ಕಲ್ಪನಾ ಬಣ್ಣದ ಜಗತ್ತಿನಲ್ಲಿ ತಮ್ಮ ಚಿನ್ನದಂತಹ ಜೀವನವನ್ನು ತಮ್ಮ ಕೈಯಾರ ಹಾಳುಮಾಡಿಕೊಂಡರು ಮಿನುಗು ತಾರೆ ಅಂದಿಗು,ಇಂದಿಗು,ಎಂದೆಂದಿಗೂ ಮಿನುಗು ತಾರೆಗೆ ಸರಿ ಸಾಟಿಯಾರಿಲ್ಲ. ಮಿನುಗುತಾರೆ ಆಕಾಶದಲ್ಲೆಂದೆದೂ ಮಿನುಗುತ್ತಿರುತ್ತಾರೆ.
ಕಲ್ಪನಾ ಸಾಹಿತ್ಯ ಸಂಸ್ಕೃತಿಗಳ ಬಗ್ಗೆ ಒಲವನ್ನು ಇಟ್ಟು ಕೊಂಡಿದ್ದರು. ಪುಸ್ತಕ ಪ್ರೇಮಿಯಾಗಿದ್ದರು. ಒಳ್ಳೆಯ ಕವಿತೆಗಳನ್ನು ಬರೆದಿದ್ದರು. ಅಂಕಣಗಳನ್ನು ಬರೆದಿದ್ದರು.