ಚಿಯಾನ್ ವಿಕ್ರಮ್ ಅಭಿನಯದ, ಪ. ರಂಜಿತ್ ನಿರ್ದೇಶನದ ಹೊಸ ಚಿತ್ರಕ್ಕೆ ಕೊನೆಗೂ ಟೈಟಲ್ ಸಿಕ್ಕಿದೆ. ಈ ಚಿತ್ರಕ್ಕೆ ‘ತಂಗಲಾನ್’ ಎಂದು ನಾಮಕರಣ ಮಾಡಲಾಗಿದ್ದು, ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.
ಈ ಹಿಂದೆ ರಜನಿಕಾಂತ್ ಅಭಿನಯದ ಕಬಾಲಿ, ಕಾಲ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ಪ. ರಂಜಿತ್, ವಿಕ್ರಮ್ ಅಭಿನಯದಲ್ಲಿ ಕೋಲಾರ ಗೋಲ್ಡ್ ಫೀಲ್ಡ್ ಹಿನ್ನೆಲೆಯಲ್ಲಿ ಒಂದು ಚಿತ್ರ ಮಾಡುತ್ತಾರೆ ಎಂಬ ಸುದ್ದಿ ಇತ್ತು. ಈ ಚಿತ್ರ ಈಗ ಅಧಿಕೃತವಾಗಿರುವುದಷ್ಟೇ ಅಲ್ಲ, ಸೋಮವಾರ ದೀಪಾವಳಿ ಹಬ್ಬದ ಪ್ರಯುಕ್ತ ಚಿತ್ರದ ಟೈಟಲ್ ಟೀಸರ್ ಸಹ ಅನಾವರಣಗೊಂಡಿದೆ.
‘ತಂಗಲಾನ್’ ಚಿತ್ರದಲ್ಲಿ ವಿಕ್ರಮ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಹಬ್ಬದ ದಿನ ಅವರ ಚಿತ್ರವೊಂದರ ಟೀಸರ್ ಬಿಡುಗಡೆಯಾಗಿದ್ದು ಅಭಿಮಾನಿಗಳಲ್ಲಿ ಸಂತಸ ತಂದಿದೆ.
ಈ ಚಿತ್ರದಲ್ಲಿ ವಿಕ್ರಮ್ ಜೊತೆಗೆ ಪಾರ್ವತಿ, ಮಾಳವಿಕಾ ಮೋಹನನ್, ಪಶುಪತಿ, ಹರಿಕೃಷ್ಣನ್, ಅನ್ಬುದುರೈ ಮುಂತಾದ ಪ್ರತಿಭಾವಂತ ಕಲಾವಿದರ ದಂಡೇ ಇದೆ. ಈ ಚಿತ್ರಕ್ಕೆ ಎ. ಕಿಶೋರ್ ಛಾಯಾಗ್ರಹಣ ಮಾಡುತ್ತಿದ್ದು, ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಪ. ರಂಜಿತ್ ಅವರೇ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದಿದ್ದು ಅವರಿಗೆ ಬರವಣಿಗೆಯಲ್ಲಿ ತಮಿಳ್ ಪ್ರಭಾ ಸಹಾಯ ಮಾಡಿದ್ದಾರೆ. ಎಸ್.ಎಸ್. ಮೂರ್ತಿ ಕಲಾನಿರ್ದೇಶನ ಮತ್ತು ಆರ್.ಕೆ. ಸೆಲ್ವಾ ಅವರ ಸಂಕಲನವಿದೆ.
ಕೆಜಿಎಫ್ ಹಿನ್ನೆಲೆಯಲ್ಲಿ ಸಾಗುವ ಈ ಆಕ್ಷನ್ ಚಿತ್ರವನ್ನು ಸ್ಟುಡಿಯೋ ಗ್ರೀನ್ ಸಂಸ್ಥೆಯಡಿ ಕೆ.ಇ. ಜ್ನಾನವೇಲ್ ರಾಜ ನಿರ್ಮಿಸುತ್ತಿದ್ದಾರೆ. ದೊಡ್ಡ ಬಜೆಟ್ನಲ್ಲಿ ಈ ಚಿತ್ರ ತಯಾರಾಗುತ್ತಿದ್ದು, ನಿರ್ಮಾಣದಲ್ಲಿ ಪ. ರಂಜಿತ್ ಅವರ ನೀಲಂ ಪ್ರೊಡಕ್ಷನ್ಸ್ ಸಹ ಕೈಜೋಡಿಸಿದೆ.