ತನು ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಹಾಗೂ ಸಂಜೋತ ಭಂಡಾರಿ ಕಥೆ ಬರೆದು ನಿರ್ದೇಶಿಸಿರುವ “ಲಂಗೋಟಿ ಮ್ಯಾನ್” ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ನಟ ಶರಣ್ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಾನು ಹತ್ತು ವರ್ಷಗಳ ಹಿಂದೆ “ಮಿರ್ಚಿ ಮಂಡಕ್ಕಿ ಖಡಕ್ ಚಾಯ್” ಚಿತ್ರವನ್ನು ನಿರ್ದೇಶಿಸಿದ್ದೆ. ಇದು ಎರಡನೇ ಚಿತ್ರ ಎಂದು ಮಾತನಾಡಿದ ನಿರ್ದೇಶಕಿ ಸಂಜೋತ ಭಂಡಾರಿ, ನಾನು ಬೇರೆ ಒಂದು ಚಿತ್ರದ ಕಥೆ ಮಾಡುತ್ತಿದ್ದಾಗ ಈ ಕಾನ್ಸೆಪ್ಟ್ ಬಂತು. ಆ ಚಿತ್ರದ ಕಥೆ ಮಾಡುತ್ತಿದ್ದಾಗಲೂ ನನಗೆ ಇದೇ ಕಥೆ ತಲೆಗೆ ಬರುತ್ತಿತ್ತು. ಕೊನೆಗೆ “ಲಂಗೋಟಿ ಮ್ಯಾನ್” ಸಿನಿಮಾ ಸ್ವರೂಪ ಪಡೆದುಕೊಂಡಿತು. ಈ ಚಿತ್ರದಲ್ಲಿ ನಿಜವಾದ ಹೀರೋ ಅಂದರೆ “ಲಂಗೋಟಿ” ನೇ. ಆಕಾಶ್ ರಾಂಬೊ, ಧೀರೇಂದ್ರ, ಮಹಾಲಕ್ಷ್ಮಿ, ಹುಲಿ ಕಾರ್ತಿಕ್, ಸಂಹಿತ ವಿನ್ಯ, ಗಿಲ್ಲಿ ನಟ, ಸ್ನೇಹ ಋಷಿ, ಪವನ್, ಆಟೋ ನಾಗರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕಥೆ ಹಾಗೂ ಸಂಭಾಷಣೆಯಲ್ಲೂ ಅನೇಕ ಮಿತ್ರರು ಸಹಾಯ ಮಾಡಿದ್ದಾರೆ. ಚಿತ್ರ ಗೆಲುವ ವಿಶ್ವಾಸ ನನಗಂತೂ ಇದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಶರಣ್ ಅವರಿಗೆ ಹಾಗೂ ಸಹಕಾರ ನೀಡಿದ ನನ್ನ ತಂಡಕ್ಕೆ ಧನ್ಯವಾದ ಎಂದರು.
ಈ ಸಮಾರಂಭಕ್ಕೆ ಬಂದು ನಿರ್ದೇಶಕರ ಮಾತು ಕೇಳಿದ ಮೇಲೆ ಅವರಿಗೆ ಚಿತ್ರದ ಮೇಲಿರುವ ಭರವಸೆ ಹಾಗೂ ತಾವೊಬ್ಬರೆ ಕ್ರೆಡಿಟ್ ತೆಗೆದುಕೊಳ್ಳದೆ, ಚಿತ್ರತಂಡದ ಪ್ರತಿಯೊಬ್ಬರನ್ನು ಪರಿಚಯಿಸಿದ ರೀತಿ ಕಂಡು ಸಂತೋಷವಾಯಿತು. ಈಗಂತೂ ಕಂಟೆಂಟ್ ಓರಿಯಂಟೆಡ್ ಚಿತ್ರಗಳನ್ನೇ ಜನ ಹೆಚ್ಚು ಇಷ್ಟಪಡುತ್ತಿದ್ದಾರೆ. ಆ ಸಾಲಿಗೆ ಲಂಗೋಟಿ ಮ್ಯಾನ್” ಸಹ ಸೇರಲಿ ಎಂದು ಶರಣ್ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸೌತ್ ಡಿಸಿಸಿ ಪ್ರೆಸಿಡೆಂಟ್ ಓ ಮಂಜುನಾಥ್ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದರು.
ಚಿತ್ರದಲ್ಲಿ ನಟಿಸಿರುವ ಆಕಾಶ್ ರಾಂಬೊ, ಧೀರೇಂದ್ರ, ಸಂಹಿತ ವಿನ್ಯ ಮುಂತಾದ ಕಾಲವಿದರು ಚಿತ್ರದ ಕುರಿತು ಮಾತನಾಡಿದರು.
“ಲಂಗೋಟಿ ಮ್ಯಾನ್” ಚಿತ್ರದ ಟೀಸರ್ ಹಾಗೂ ಪೋಸ್ಟರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ
ಟೀಸರ್ ನೋಡಿದಾಗ ಮನೋರಂಜನಾ ಪ್ರಧಾನ ಚಿತ್ರ ಎನಿಸಿದರೂ, ಚಿತ್ರದ ಮೂಲಕ ಬೇರೊಂದು ವಿಷಯವನ್ನು ಹೇಳ ಹೊರಟಿರುವುದು ತಿಳಿಯುತ್ತದೆ.