K.R.S ಪ್ರೊಡಕ್ಷನ್ಸ್ ನ ಚೊಚ್ಚಲ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಪ್ಪಾ ಐ ಲವ್ ಯೂ ಶೀರ್ಷಿಕೆ ಹಾಗೂ ಪೋಸ್ಟರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಲವ್ಲಿ ಸ್ಟಾರ್ ಪ್ರೇಮ್ ಹಾಗೂ ಟಗರು ಪುಟ್ಟಿ ಖ್ಯಾತಿಯ ಮಾನ್ವಿತ್ ಕಾಮತ್ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿದ್ದು, ತಬಲಾ ನಾಣಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಸಂಜಯ್, ಜೀವಿತಾ, ರಂಗೀತರಂಗ ಅರವಿಂದ್, ವಿಜಯ್ ಚೆಂಡೂರ್, ಬಲ ರಾಜ್ವಾಡಿ, ಮಿಮಿಕ್ರಿ ಗೋಪಿ, ಅರುಣ ಬಾಲರಾಜ್, ವರ್ಧನ್ ತೀರ್ಥಹಳ್ಳಿ, ಗಿರೀಶ್ ಜತ್ತಿ, ಪಟೇಲ್ ಅಣ್ಣಯ್ಯಪ್ಪ ಸೇರಿದಂತೆ ಹಲವು ತಾರಾಬಳಗ ಚಿತ್ರದಲ್ಲಿದೆ.
ಜೂಟಾಟ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ಅಥರ್ವ್ ಆರ್ಯ ಅಪ್ಪಾ ಐ ಲವ್ ಯೂ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದು, ಇದು ಇವರ ಎರಡನೇ ಪ್ರಯತ್ನ. ಟೈಟಲ್ ಹೇಳುವಂತೆ ಇದು ತಂದೆಯ ಮಹತ್ವ ಸಾರುವ ಸಿನಿಮಾ. ಕುಟುಂಬದಲ್ಲಿ ಅಥವಾ ಸಮಾಜದಲ್ಲಿ ತಂದೆ ಕಡೆಗಣನೆಗೆ ಒಳಗಾದಾಗ ಯಾವ ರೀತಿ ನೋವು ಅನುಭವಿಸುತ್ತಾನೆ ಎಂಬುದೇ ಕಥೆಯ ತಿರುಳು. ಇಲ್ಲಿ ತಂದೆಯಾಗಿ ತಬಲಾನಾಣಿ ಬಣ್ಣ ಹಚ್ಚಿದ್ದು, ರಂಗಭೂಮಿ ಕಲಾವಿದರಾದ ಸಂಜಯ್ ಹಾಗೂ ಜೀವಿತ ವಸಿಷ್ಠ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ.
ಅಪ್ಪಾ ಐ ಲವ್ ಯೂ ಸಿನಿಮಾಗೆ ನಾಗಾರ್ಜುನ್ ಆರ್ ಡಿ ಛಾಯಾಗ್ರಹಣ, ವೇಧಿಕ್ ವೀರ ಸಂಕಲನ, ಗಂಗಮ್ ರಾಜು ಕೊರಿಯೋಗ್ರಫಿ ಚಿತ್ರಕ್ಕಿದೆ. ಆಕಾಶ್ ಪರ್ವ ಸಂಗೀತ ನಿರ್ದೇಶನದ ಹಾಡುಗಳಿಗೆ ಡಾ.ನಾಗೇಂದ್ರ ಪ್ರಸಾದ್, ಕವಿರಾಜ್, k. ಕಲ್ಯಾಣ್, ಕಿನ್ನಾಳ್ ರಾಜ್ ಸಾಹಿತ್ಯ ಬರೆದಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು ಸುತ್ತಮುತ್ತ 65 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದ್ದು, ಶೀಘ್ರದಲ್ಲಿಯೇ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ.