ಅಭಿ- ಐಶ್ ದಂಪತಿ ದೂರಾಗುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪದೇ ಪದೆ ವದಂತಿ ಹರಡುತ್ತಲೇ ಇರುತ್ತದೆ. ಇದು ಸುಳ್ಳು ಎಂದು ಹೇಳಿದರು ಕೆಲವರು ಕೇಳುತ್ತಿಲ್ಲ. ಇನ್ನು ಆರಾಧ್ಯ ಬಚ್ಚನ್ ಬಗ್ಗೆ ಕೂಡ ಇಲ್ಲಸಲ್ಲದ ಸುದ್ದಿ ಹರಡಲಾಗುತ್ತಿದೆ. ಮುಖ್ಯವಾಗಿ ಆಕೆಯ ಆರೋಗ್ಯದ ಬಗ್ಗೆ ಸುಳ್ಳು ವದಂತಿ ವೈರಲ್ ಆಗುತ್ತಿದೆ. ಇದನ್ನು ಪ್ರಶ್ನಿಸಿ ಆಕೆ ಈಗ ಕೋರ್ಟ್ ಮೆಟ್ಟಿಲೇರಿದ್ದಾಳೆ. ಕೆಲ ವೆಬ್‌ಸೈಟ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟವಾದ ಇಂತಹ ಸುಳ್ಳು ಸುದ್ದಿ ತೆಗೆಯಬೇಕು ಎಂದು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಆರಾಧ್ಯ ಬಚ್ಚನ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಕೆಲ ಯೂಟ್ಯೂಬ್ ಚಾನೆಲ್‌ಗಳಲ್ಲಿ ಸುಳ್ಳು ಮಾಹಿತಿ ಹರಡಲಾಗಿದೆ. ಇನ್ನು ಕೆಲ ಯೂಟ್ಯೂಬ್ ಚಾನೆಲ್‌ಗಳಲ್ಲಿ ಆಕೆ ನಿಧನರಾಗಿದ್ದಾರೆಂದು ಕೂಡ ತಪ್ಪು ಸುದ್ದಿ ತೇಲಿ ಬಿಟ್ಟಿದ್ದಾರೆ. ಇದನ್ನು ವಿರೋಧಿಸಿ ಆರಾಧ್ಯ ಮತ್ತು ಆಕೆಯ ತಂದೆ ಅಭಿಷೇಕ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಹಿಂದೆ 2013ರಲ್ಲಿ ಕೂಡ ಇದೇ ವಿಚಾರವಾಗಿ ಆರಾಧ್ಯ ಕೋರ್ಟ್ ಅನ್ನು ಆಶ್ರಯಿಸಿದ್ದರು. ಆದರೂ ಕೆಲ ವೆಬ್‌ಸೈಟ್‌ಗಳು, ಸೋಶಿಯಲ್ ಮೀಡಿಯಾ ಪೇಜ್‌ಗಳು ಹೈಕೋರ್ಟ್ ಆದೇಶ ಪಾಲಿಸದ ಕಾರಣ ಮತ್ತೆ ಅರ್ಜಿ ಸಲ್ಲಿಸುವಂತಾಗಿದೆ.
ಈ ಹಿಂದೆ ದಾಖಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಪ್ರತಿಯೊಂದು ಮಗುವನ್ನು ಗೌರವಿಸಬೇಕು. ಅವರ ಆರೋಗ್ಯದ ಬಗ್ಗೆ ಸುಳ್ಳು ಮಾಹಿತಿ ಹರಡುವುದನ್ನು ಕಾನೂನು ಸಹಿಸುವುದಿಲ್ಲ ಎಂದು ಹೇಳಿತ್ತು. ಜಸ್ಟೀಸ್ ಸಿ ಹರಿ ಶಂಕರ್ ಇದನ್ನು ತೀವ್ರವಾಗಿ ಖಂಡಿಸಿದ್ದರು. ಸುಳ್ಳು ವೀಡಿಯೊಗಳನ್ನು ಯೂಟ್ಯೂಬ್ ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕುವಂತೆ ಗೂಗಲ್‌ಗೆ ಆದೇಶಿಸಿತ್ತು. ಇಂತಹ ಯಾವುದೇ ಸುಳ್ಳು ಮಾಹಿತಿ ಗಮನಕ್ಕೆ ಬರುತ್ತಿದ್ದಂತೆ ಗೂಗಲ್ ಅಳಿಸಿ ಹಾಕಬೇಕು ಎಂದು ಕೋರ್ಟ್ ಆದೇಶ ನೀಡಿತ್ತು.