ಎನ್ನುವ ಹೆಸರಿನ ಇಂಗ್ಲೀಷ್ ಸಿನಿಮಾ ಇದೆ. ಅದರ ಬಗೆಗೆ ಹೇಳುವ ಮೊದಲು ಇನ್ನೊಂದು ವಿಷಯಕ್ಕೆ ಬರುತ್ತೇನೆ. ಚಾಮರಾಜನಗರದ ಪಕ್ಕ ಚಂದಕವಾಡಿ ಎನ್ನುವ ಊರಿದೆ. ಅಲ್ಲೊಂದು ಚಿತ್ರಮಂದಿರವಿತ್ತು . ಈಗಲೂ ಇರಬಹುದಾ? ಗೊತ್ತಿಲ್ಲ ! ನಾವು ನಮ್ಮಜ್ಜಿಯ ಮನೆಗೆ ಹೋದಾಗಲೆಲ್ಲ ಆ ಚಿತ್ರಮಂದಿರ ಮತ್ತು ಕಾಗಲವಾಡಿ ಯ ವೀರಭದ್ರೇಶ್ವರ ಚಿತ್ರಮಂದಿರಗಳು ನಮ್ಮ ಮನರಂಜನೇಯ ಮನೆಗಳಾಗಿ ಬಿಡುತ್ತಿದ್ದವು.
ಅಲ್ಲಿ ಒಮ್ಮೆ ಕರುಳಿನ ಕೂಗು ಸಿನಿಮಾ ಪ್ರದರ್ಶನ ಕಾಣುತ್ತಿತ್ತು. ಜನವೋ ಜನ! ನಮಗೆ ಆಗ ಅಂತಹ ಚಿತ್ರಗಳ ಬಗೆಗೆ ಕುತೂಹಲವಿರಲಿಲ್ಲ. ಆದರೇ ಪರದೆಯ ಮೇಲೆ ಏನೆ ಕಾಣಿಸಿದರೂ ನೋಡುವ ಉಮ್ಮೇದು ಇತ್ತಲ್ಲ.. ಹಾಗಾಗಿ ಒಳಗೆ ಹೋಗಿ ಕುಳಿತುಕೊಂಡೆ. ಅರ್ಧ ಸಿನಿಮಾದ ನಂತರ ಇಡೀ ಚಿತ್ರಮಂದಿರವೇ ಗೊಳೋ ಎಂದು ಅಳುತ್ತಿತ್ತು. ಸುತ್ತಮುತ್ತ ನೋಡಿದರೇ ಹೆಂಗಸರು ಸೆರಗನ್ನು ಕಣ್ಣಿಗೊತ್ತಿಕೊಳ್ಳುತ್ತಾ ದೇವರ ಮೊರೆ ಹೋಗುತ್ತಾ ಅಳುತ್ತಿದ್ದರು.


ಇಲ್ಲಿ ಟೈಗರ್ ಪ್ರಭಾಕರ್ ಪಾತ್ರವೇ ವಿಚಿತ್ರ. ಒಳ್ಳೆ ಗಂಡ, ಒಳ್ಳೆ ಅಪ್ಪನಂತೆ ನಾನು ಬಡವ, ನಾನು ಬಡವಿ.. ಆದರೇ ಪ್ರೀತಿಗೆ ಬಡತನವಿಲ್ಲ ಎಂದೆಲ್ಲಾ ಬೆಳಿಗ್ಗೆ ಸಮಯ ಹಾಡಿ ಕುಣಿದು ರಾತ್ರಿಯಾಯಿತೆಂದರೇ ಕಂಠ ಮಟ್ಟ ಕುಡಿದು ತೂರಾಡುವ ಪಾತ್ರವದು. ಏನೇ ಆದರೂ ಕುಡಿತ ಬಿಡದ ಆ ಪಾತ್ರ ಸತ್ತ ಮೇಲೆ ಮಾರಣಾಂತಿಕ ಖಾಯಿಲೆ ಇರುವ ತಾಯಿ ತಾನು ಸಾಯುವ ಮುನ್ನ ತನ್ನ ಮಕ್ಕಳಿಗೆ ಪೋಷಕರನ್ನು ಹುಡುಕುವ ಕಥೆ ಚಿತ್ರದ್ದು. ಜನರು ಅದೆಷ್ಟು ಅತ್ತಿದ್ದರೂ ಅಂದರೇ ಅಬ್ಬಬ್ಬಾ..! ನಿಜವಾಗಿ ಕಣ್ಣ ಮುಂದೆಯೇ ನಡೆಯುತ್ತಿದೆಯೇನೋ ಎನ್ನುವಷ್ಟು.
ಅಂದ ಹಾಗೆ ಇದು ವ್ಹೂ ವಿಲ್ ಲವ್ ಮೈ ಚಿಲ್ಡ್ರನ್ ಚಿತ್ರದ ರೀಮೇಕ್. ವ್ಹೂ ವಿಲ್ ಲವ್ ಮೈ ಚಿಲ್ಡ್ರನ್ ಚಿತ್ರವು ಸತ್ಯ ಘಟನೆಯಾಧಾರಿತ ಚಿತ್ರ. ಲುಸಿಲಿ ಫ್ರೇ ಎನ್ನುವ ಮಹಾತಾಯಿಗೆ ಮಾರಣಾಂತಿಕ ಖಾಯಿಲೆ ಬಂದಾಗ ತನ್ನ ಹತ್ತು ಮಕ್ಕಳಿಗೆ ಪೋಷಕರನ್ನು ಹುಡುಕುತ್ತಾಳೆ.



ಈ ಚಿತ್ರ ಆನಂತರ ಟರ್ಕಿಷ್ ಭಾಷೆಯಲ್ಲಿ ಯವ್ರುಲಾರಿಂ ಹೆಸರಿನಲ್ಲಿ 1984 ರಲ್ಲಿ ರೀಮೇಕ್ ಆದರೇ,
1993 ರಲ್ಲಿ ಮಲಯಾಳಂ ನಲ್ಲಿ ಆಕಾಶದೂತು ರೀಮೇಕ್ ಆಗಿ ಒಂದು ವರ್ಷಗಳ ಕಾಲ ಸತತ ಪ್ರದರ್ಶನ ಕಂಡಿತಲ್ಲದೇ ರಾಷ್ಟ್ರಪ್ರಶಸ್ತಿಯನ್ನೂ ರಾಜ್ಯ ಪ್ರಶಸ್ತಿಗಳನ್ನೂ ತನ್ನದಾಗಿಸಿಕೊಂಡಿತ್ತು.
ಇದೇ ಚಿತ್ರ ತೆಲುಗಿನಲ್ಲಿ 1993 ರಲ್ಲಿ ಮಾತ್ರುದೇವೋಭವ ಹೆಸರಿನಲ್ಲಿ ರೀಮೇಕ್ ಆಗಿ ಅಲ್ಲಿಯೂ ಸೂಪರ್ ಹಿಟ್. ಕನ್ನಡದಲ್ಲೂ ಎರ್ರಾಬಿರ್ರಿ ಹಿಟ್. ಆದರೇ 2008 ರಲ್ಲಿ ಮನಿಶಾ ಕೊಯಿರಾಳ ಅಭಿನಯದಲ್ಲಿ ಬಂದ ಇದೇ ಚಿತ್ರ ತುಳಸಿ ಅಟ್ಟರ್ ಫ್ಲಾಪ್.
ಈಗಲೂ ಈ ಸಿನಿಮಾದ ಪೋಸ್ಟರ್ ಕಂಡರೇ
ಸಿನಿಮಾದ ಯಾವ ದೃಶ್ಯವೂ ನೆನಪಿಗೆ ಬರುವುದಿಲ್ಲ.
ಬದಲಿಗೆ
ಕುಯುವ ಪಿಟೀಲು ….
ಜೊತೆಗೆ
ಹಿಂದೆ ಕುಳಿತು ರೋಧಿಸುತ್ತಿದ್ದ ಹೆಂಗಸರು- ಮಕ್ಕಳು ನೆನಪಿಗೆ ಬರುತ್ತಾರೆ.
