Sandalwood Leading OnlineMedia

ಭಾರೀ ಸದ್ದು ಮಾಡುತ್ತಿದೆ ಬಿರಾದಾರ್ ಅಭಿನಯದ ಐನೂರನೇ ಚಿತ್ರದ ಟೈಟಲ್ ಸಾಂಗ್

ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ಬಿರಾದಾರ್ ಅಭಿನಯದ ಐನೂರನೇ ಸಿನಿಮಾ ಎಂದಾಗಿನಿಂದ ಸುದ್ದಿಯಲ್ಲಿದ್ದ “90 ಬಿಡಿ ಮನೀಗ್ ನಡಿ” ಸಿನಿಮಾ ಇದೀಗ ಚಿತ್ರದ ಟೈಟಲ್ ಹಾಡನ್ನ ಬಿಡುಗಡೆಗೊಳಿಸಿ ಸದ್ದು ಮಾಡತೊಡಗಿದೆ. ಈ ಹಿಂದೆ ಉತ್ತರ ಕರ್ನಾಟಕದ ನಾಟಿ ಶೈಲಿಯ “ಸಿಂಗಲ್ ಕಣ್ಣಾ ಹಾರಸ್ತಿ.. ಡಬ್ಬಲ್ ಹಾರನ್ ಬಾರಸ್ತಿ..” ಎಂಬ ಕಚಗುಳಿ ಇಡುವ ಜವಾರಿ ಹಾಡು ಬಿಟ್ಟು ಹಿಟ್ ಮಾಡಿಕೊಂಡಿತ್ತು. ಎಪ್ಪತ್ತು ವರ್ಷದ ಬಿರಾದಾರ್ ಚಿತ್ರದ ನಾಯಕಿಯ ಜೊತೆ ಡಾನ್ಸ್ ಮಾಡಿದ ಎನರ್ಜಿ ಕಂಡು ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದರು. ಅಲ್ಲಿಂದಾಚೆಗೆ ಚಿತ್ರದ ಮೇಲೊಂದು ನಿರೀಕ್ಷೆ ಮೂಡಿಕೊಂಡಿತ್ತು.

ಇದನ್ನೂ ಓದಿ:  *ಎ.ಹರ್ಷ ನಿರ್ದೇಶನದಲ್ಲಿ ‘ಭೀಮ’ನಾದ ಗೋಪಿಚಂದ್….ಹೇಗಿದೆ ಫಸ್ಟ್ ಲುಕ್?*

ಮುಂದುವರೆದ ಚಿತ್ರತಂಡ ಇದೀಗ ಡಾ. ವಿ. ನಾಗೇಂದ್ರ ಪ್ರಸಾದ್ ರಚನೆಯ, ಡಾ. ರಾಜೇಶ್ ಕೃಷ್ಣನ್ ಧ್ವನಿಯಲ್ಲಿ ಮೂಡಿಬಂದ ಹಾಡು ಬಿಡುಗಡೆಗೊಳಿಸಿದೆ. ಕಿರಣ್ ಶಂಕರ್ ಸಂಗೀತ ನಿರ್ದೇಶನವಿರುವ ಈ ಹಾಡು ” ಸಂಜೆ ಗಂಟ ಸುಮ್ನೆ ದುಡಿ.. ನೈಂಟಿ ಹೊಡಿ ಮನೀಗ್ ನಡಿ” ಎಂಬ ಸಾಲುಗಳಿಂದ ಪ್ರಾರಂಭಗೊಂಡು, “ಸಂಜೆ ಆದ್ರೆ ಆಗು ರೆಡಿ.. ನೈಂಟಿ ಹೊಡಿ ಮನೀಗ್ ನಡಿ” ಎಂಬ ಸಾಲಿನ ಜೊತೆ ಸೇರಿಕೊಂಡು ” ಇವತ್ತೆ ಲಾಸ್ಟು ಗುರು, ನಾಳೆಯಿಂದ ನಾನ್ ಎಣ್ಣೆ ಹೊಡಿಯಲ್ಲ” ಎನ್ನುತ್ತಾ ಮಜವಾಗಿ ಕೊನೆಗೊಳ್ಳುತ್ತದೆ. ಇದೇ ಚಿತ್ರದ “ಸಿಂಗಲ್ ಕಣ್ಣಾ” ಹಾಡಿಗೆ ಬಿರಾದಾರ್ ಜೊತೆ ಪ್ರಯೋಗ ಮಾಡಿ ಗೆದ್ದ ಭೂಷಣ್ ಇಲ್ಲಿಯೂ ಕೊರಿಯೋಗ್ರಫಿಯಲ್ಲಿ ಸದ್ದು ಮಾಡಿದ್ದಾರೆ.
‘ಅಮ್ಮ ಟಾಕೀಸ್ ಬಾಗಲಕೋಟೆ’ ಸಂಸ್ಥೆಯಡಿ ರತ್ನಮಾಲ ಬಾದರದಿನ್ನಿ ನಿರ್ಮಿಸಿರುವ ಈ ಚಿತ್ರಕ್ಕೆ ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ನಿರ್ದೇಶನ ಮಾಡಿದ್ದು, ಕೃಷ್ಣ ನಾಯ್ಕರ್ ಛಾಯಾಗ್ರಹಣ, ವೆಂಕಿ ಯುಡಿವಿ ಸಂಕಲನವಿದೆ. ಒಟ್ಟಿನಲ್ಲಿ ಮಜವಾದ ಸಾಹಿತ್ಯದ ಜೊತೆ ನಶೆ ಏರಿಸುವ ಎಣ್ಣೆ ಹಾಡಿಗೆ ನಟ ಬಿರಾದಾರ್ ಜೊತೆ ಕರಿಸುಬ್ಬು, ಪ್ರಶಾಂತ್ ಸಿದ್ದಿ ಸಖತ್ ಸ್ಟೆಪ್ ಹಾಕಿದ್ದು, ಹಾಡಿಗೊಂದು ಮೆರಗುಕೊಟ್ಟಿದ್ದಾರೆ. ಅಂದಹಾಗೆ ಇದೇ ಬರುವ ಹದಿನೇಳನೇ ತಾರೀಖಿಗೆ ಚಿತ್ರದ ಟ್ರೈಲರ್ ಬಿಡುಗಡೆಯ ಸಿದ್ಧತೆಯಲ್ಲಿ ಚಿತ್ರತಂಡವಿದೆ.

 

Share this post:

Related Posts

To Subscribe to our News Letter.

Translate »