Left Ad
70ರ ದಶಕದ ಶೈಲಿಯಲ್ಲಿ ಮೂಡಿ ಬರುತ್ತಿದೆ ‘666 ಆಪರೇಷನ್ ಡ್ರೀಮ್ ಥಿಯೇಟರ್’! - Chittara news
# Tags

70ರ ದಶಕದ ಶೈಲಿಯಲ್ಲಿ ಮೂಡಿ ಬರುತ್ತಿದೆ ‘666 ಆಪರೇಷನ್ ಡ್ರೀಮ್ ಥಿಯೇಟರ್’!

ಹೇಮಂತ್ ಎಂ. ರಾವ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ಪ್ರೇಕ್ಷಕರನ್ನು 1970ರ ದಶಕದ ಕನ್ನಡ ಚಿತ್ರರಂಗದ ಬಾಂಡ್ ಯುಗಕ್ಕೆ ಕರೆದುಕೊಂಡು ಹೋಗುತ್ತಿದೆ. ಆ ಕಾಲದ ವಸ್ತ್ರ ವಿನ್ಯಾಸ, ಬೆಳಕು, ಸೆಟ್ ವಿನ್ಯಾಸಗಳ ಜೊತೆಗೆ, ಡಾ. ರಾಜ್‌ಕುಮಾರ್ ಅವರ ಕಾಲದ ‘ವಿಂಟೇಜ್ ಲೊಮೋಸ್’ ಕ್ಯಾಮೆರಾ ಲೆನ್ಸ್‌ಗಳನ್ನು ಬಳಸಿಕೊಂಡು ಚಿತ್ರವನ್ನು ಚಿತ್ರೀಕರಿಸಲಾಗುತ್ತಿದೆ.

ಚಿತ್ರದ ಛಾಯಾಗ್ರಾಹಕ ಅದ್ವೈತ್ ಗುರುಮೂರ್ತಿ ಹೇಳುವಂತೆ — “ಪ್ರತಿ ಶಾಟ್, ಬೆಳಕು ಮತ್ತು ಸೆಟ್‌ಗಳು ಅಣ್ಣಾವ್ರ ‘ಆಪರೇಷನ್ ಡೈಮಂಡ್ ರಾಕೆಟ್’, ‘ಜೇಡರ ಬಲೆ’ ಚಿತ್ರಗಳ ಶೈಲಿಯಲ್ಲಿರಬೇಕು ಅನ್ನೋದು ನಮ್ಮ ಉದ್ದೇಶ. ಅದಕ್ಕಾಗಿ ನಾವು ಪೋಸ್ಟ್ ಪ್ರೊಡಕ್ಷನ್‌ಗೆ ಮಾತ್ರ ಅವಲಂಬಿಸದೆ, ಶೂಟಿಂಗ್ ವೇಳೆ ನೇರವಾಗಿ ಆ ಯುಗದ ಶೈಲಿಯ ಟಂಗ್ಸ್‌ಟನ್ ಲೈಟ್ಸ್ ಮತ್ತು ವಿಂಟೇಜ್ ಲೆನ್ಸ್‌ಗಳನ್ನು ಬಳಸಿದ್ದೇವೆ.”

ತಂಡವು 16 ವಿಭಿನ್ನ ಲೆನ್ಸ್ ಸೆಟ್‌ಗಳನ್ನು ಪರೀಕ್ಷಿಸಿ, ಕೊನೆಯಲ್ಲಿ ವಿಂಟೇಜ್ ಲೊಮೋ ಅನಾಮಾರ್ಫಿಕ್ ಮತ್ತು ಲೊಮೋ ಸ್ಫೆರಿಕಲ್ ಲೆನ್ಸ್‌ಗಳನ್ನು ಆಯ್ಕೆಮಾಡಿದೆ. ಈ ಲೆನ್ಸ್‌ಗಳು ತಮ್ಮ ಆರ್ಗ್ಯಾನಿಕ್ ಫ್ಲೇರ್‌ಗಳು, ಪೇಂಟರ್‌ಲಿ ಫಾಲ್-ಆಫ್ ಮತ್ತು ಇಂಪರ್‌ಫೆಕ್ಟ್ ಬ್ಯೂಟಿಗಾಗಿ ಪ್ರಸಿದ್ಧ.

ಧನಂಜಯ್ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಚಿತ್ರವನ್ನು ಡಾ. ವೈಶಾಖ್ ಜೆ ಗೌಡ ಅವರ ವೈಶಾಖ್ ಜೆ ಫಿಲ್ಮ್ಸ್ ನಿರ್ಮಿಸುತ್ತಿದೆ. ಚರಣ್ ರಾಜ್ ಸಂಗೀತ ನಿರ್ದೇಶಕರಾಗಿದ್ದು, ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶೇಷವೆಂದರೆ, ಡಾ. ಶಿವರಾಜ್‌ಕುಮಾರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಭಾರೀ ಬಜೆಟ್‌ನೊಂದಿಗೆ ನಿರ್ಮಾಣವಾಗುತ್ತಿರುವ ‘666 ಆಪರೇಷನ್ ಡ್ರೀಮ್ ಥಿಯೇಟರ್’, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದ್ದು, ಪ್ರೇಕ್ಷಕರಿಗೆ ವಿಂಟೇಜ್ ಶೈಲಿಯ ವಿಶಿಷ್ಟ ದೃಶ್ಯಾನುಭವ ನೀಡಲಿದೆ.

Spread the love
Translate »
Right Ad