ಶಾರುಖ್ ಖಾನ್ ಅಭಿನಯದ ‘ಜವಾನ್’ ಚಿತ್ರವು ಸೆ.07ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಜಗತ್ತಿನ ಆರು ಅತ್ಯುತ್ತಮ ಮತ್ತು ಜನಪ್ರಿಯ ನಿರ್ದೇಶಕರು ಸಾಹಸ ಸಂಯೋಜನೆ ಮಾಡಿದ್ದಾರೆ.
ಮೂಲಗಳ ಪ್ರಕಾರ, ಅಂತರರಾಷ್ಟ್ರೀಯ ಮಟ್ಟದ ಸಾಹಸ ನಿರ್ದೇಶಕರಾದ ಸ್ಪೈರೋ ರಾಝಾಟೋಸ್, ಯಾನಿಕ್ ಬೆನ್, ಕ್ರೇಗ್ ಮೆಕ್ರೆ, ಕೆಚಾ ಕೆಂಪಾಕ್ಡಿ, ಸುನೀಲ್ ರಾಡ್ರಿಗ್ಸ್ ಮತ್ತು ಅನಲ್ ಅರಸ್ ಅವರು ‘ಜವಾನ್’ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದಾರೆ. ಈ ಚಿತ್ರದಲ್ಲಿ ಫೈಟ್, ಚೇಸ್, ಪಾರ್ಕರ್ ಸೇರಿದಂತೆ ವಿಭಿನ್ನ ರೀತಿಯ ಸಾಹಸ ದೃಶ್ಯಗಳಿದ್ದು, ಆ ಪ್ರಕಾರದಲ್ಲಿ ಪರಿಣಿತಿ ಹೊಂದಿರುವ ಒಬ್ಬೊಬ್ಬ ಸಾಹಸ ನಿರ್ದೇಶಕರು ಈ ಚಿತ್ರಕ್ಕೆ ಕೆಲಸ ಮಾಡಿರುವುದು ವಿಶೇಷ.
ಈ ಸಾಹಸ ನಿರ್ದೇಶಕರು ಬರೀ ಹಾಲಿವುಡ್ ಅಷ್ಟೇ ಅಲ್ಲ, ಹಲವು ಅಂತಾರಾಷ್ಟ್ರೀಯ ಸಿನಿಮಾಗಳಿಗೆ ಕೆಲಸ ಮಾಡಿ ತಮ್ಮ ಛಾಪನ್ನೊತ್ತಿದ್ದಾರೆ. ಒಬ್ಬೊಬ್ಬರು ಒಂದೊಂದು ವಿಭಾಗದಲ್ಲಿ ಪರಿಣಿತಿ ಹೊಂದಿದ್ದಾರೆ. ಜಗತ್ತಿನ ಜನಪ್ರಿಯ ಆಕ್ಷನ್ ಚಿತ್ರಗಳಲ್ಲಿ ಮೈ ಜುಂ ಎನಿಸುವಂತಹ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ.
ಈ ಪೈಕಿ ಸ್ಪೈರೋ ರಾಝಾಟೋಸ್, ‘ಫಾಸ್ಟ್ ಅಂಡ್ ಫ್ಯೂರಿಯಸ್’, ‘ಕ್ಯಾಪ್ಟೇನ್ ಅಮೇರಿಕಾ’ ಮುಂತಾದ ಚಿತ್ರಗಳಿಗೆ ಕೆಲಸ ಮಾಡಿದ್ದರು. ಈ ಹಿಂದೆ, ಶಾರುಖ್ ಅಭಿನಯದ ‘ರಾ ಒನ್’ ಚಿತ್ರಕ್ಕೂ ಅವರು ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದರು. ಯಾನಿಕ್ ಬೆನ್ ಅವರು ಪಾರ್ಕರ್ ದೃಶ್ಯಗಳನ್ನು ಸೆರೆಹಿಡಿಯುವುದರಲ್ಲಿ ಜನಪ್ರಿಯರು. ಇನ್ನು, ಸುನೀಲ್ ರಾಡ್ರಿಗ್ಸ್, ಅನಲ್ ಅರಸು ಮುಂತಾದವರು ಭಾರತದ ಬೇರೆಬೇರೆ ಭಾಷೆಯ ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡುವ ಮೂಲಕ ಖ್ಯಾತಿ ಗಳಿಸಿದವರು.
ಈ ಸಾಹಸ ದೃಶ್ಯಗಳನ್ನು ಸಾಕಷ್ಟು ಅಧ್ಯಯನ ನಡೆಸುವುದಷ್ಟೇ ಅಲ್ಲ, ರೋಚಕವಾಗಿ ಸೆರೆಹಿಡಿಯಲಾಗಿದ್ದು, ಒಟ್ಟಾರೆ ಸಾಹಸ ಭಾಗವೇ ಚಿತ್ರವನ್ನು ಇನ್ನೊಂದು ಮಟ್ಟಕ್ಕೆ ಕರೆದೊಯ್ಯಲಿದೆ ಎಂದು ಹೇಳಲಾಗುತ್ತಿದೆ. ಈ ದೃಶ್ಯಗಳು ಕಥೆಗೆ ಪೂರಕವಾಗಿರುವುದಷ್ಟೇ ಅಲ್ಲ, ನೈಜವಾಗಿ ಮೂಡಿಬಂದಿದ್ದು, ಚಿತ್ರದ ಬಗೆಗಿನ ಪ್ರೇಕ್ಷಕರ ಕುತೂಹಲ ಮತ್ತು ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಾಗಿಸಿದೆ.
‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ನಡಿ ಗೌರಿ ಖಾನ್ ನಿರ್ಮಿಸಿದರೆ, ಗೌರವ್ ವರ್ಮ ಸಹ ನಿರ್ಮಾಪಕರಾಗಿದ್ದಾರೆ. ಅಟ್ಲಿ ನಿರ್ದೇಶಿಸಿರುವ ಈ ಚಿತ್ರವು ಜಗತ್ತಿನಾದ್ಯಂತ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.