ಹಿಂದೆ ಒಂದು ಕಾಲ ಇತ್ತು. ಒಂದೊಂದು ಸಿನಿಮಾವೂ 25 ವಾರ 50 ವಾರಗಳ ಪ್ರದರ್ಶನ ಕಾಣುತ್ತಿತ್ತು. ಆದರೆ ಈಗ ಆ ಕಾಲವೆಲ್ಲಾ ಮಾಯವಾಗಿ ಬಹಳ ವರ್ಷಗಳೇ ಕಳೆದಿವೆ.
ಈಗೇನಿದ್ದರು ಎರಡು ವಾರಗಳ ಕಾಲ ಥಿಯೇಟರ್ನಲ್ಲಿ ಉಳಿದರೇನೆ ಹೆಚ್ಚು. ಇಂತಹ ಕಾಲದಲ್ಲಿ.. ಚಿತ್ರವೊಂದು ಮೂರು ವಾರ ಚಿತ್ರಮಂದಿರದಲ್ಲಿ ಉಳಿಯುವುದು ಕಷ್ಟ ಎಂಬ ವಾತಾವರಣ ಇದೆ.
ಇನ್ನೂ ಹೊಸಬರ ಕಥೆ ಕೇಳುವುದಕ್ಕೂ.. ಹೇಳುವುದಕ್ಕೂ ಇದು ಸಮಯ ಅಲ್ಲ. ಸನ್ನಿವೇಶ ಹೀಗಿರುವಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಚಿತ್ರ ನೂರು ದಿನಗಳನ್ನ ಪೂರೈಸಿದೆ. ಈ ಸಂತಸದ ಗಳಿಗೆಯನ್ನು ಇಡೀ ಚಿತ್ರತಂಡ ಕೇಕ್ ಕಟ್ ಮಾಡುವ ಮೂಲಕ ಸೆಲೆಬ್ರೇಟ್ ಮಾಡಿದೆ.
ಓಟಿಟಿಯಲ್ಲಿ ಅಷ್ಟೇ ಅಲ್ಲದೇ ಕಿರುತೆರೆಯಲ್ಲಿಯೂ ಪ್ರದರ್ಶನ ಕಂಡು ಜನಮೆಚ್ಚುಗೆಗೆ ಪಾತ್ರವಾಗಿದೆ. ಇವೆರಡು ಕಡೆ ದಾಖಲೆಯ ಬಾವುಟವನ್ನೂ ನೆಟ್ಟಿದೆ. ಸಂಭ್ರಮ ಪಡಲು ಇದಕ್ಕಿಂತ ಕಾರಣ ಬೇಕಾ..? ಹೀಗಾಗಿಯೇ ಕಾಟೇರದ ಕ್ಯಾಪ್ಟನ್ ತರುಣ್ ಸುಧೀರ್ ತಮ್ಮ ಚಿತ್ರತಂಡ ಎಂಬ ಕುಟುಂಬದ ಜೊತೆ ಕೇಕ್ ಕಟ್ ಮಾಡಿದ್ದಾರೆ. ಸಂಭ್ರಮಿಸಿದ್ದಾರೆ.
ತರುಣ್ ಸುಧೀರ್ ಜೊತೆ ಕಾಟೇರದ ಕ್ಯಾಮರಾ ಕಣ್ಣು ಸುಧಾಕರ್ ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಇನ್ನೂ.. ಚಾಲೆಂಜಿಂಗ್ ಸ್ಟಾರ್ ದರ್ಶನ್, ಇತ್ತೀಚೆಗಷ್ಟೇ ಕೈ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಹೇಳಿದ್ದಾರೆ. ಈ ಕಾರಣಕ್ಕೆ ದರ್ಶನ್ ಈ ಸಂಭ್ರಮ..ಸಡಗರದಲ್ಲಿ.. ಭಾಗಿಯಾಗಿರಲಿಲ್ಲ.
ಉಳಿದಂತೆ ಸಂಗೀತ ನಿರ್ದೇಶಕ ವಿ .ಹರಿಕೃಷ್ಣ ಹಾಗೂ ದರ್ಶನ್ ಅವರಿಗೆ ಮಿಸ್ಟರ್ ಐರಾವತ ಚಿತ್ರ ನಿರ್ದೇಶಿಸಿದ್ದ, ಧ್ರುವಾ ಸರ್ಜಾ ಅವರಿಗೆ ಮಾರ್ಟಿನ್ ಚಿತ್ರವನ್ನ ಸದ್ಯ ನಿರ್ದೇಶಿಸಿರುವ ಎ.ಪಿ.ಅರ್ಜುನ್ ಕಾಟೇರ ಚಿತ್ರದ ನೂರು ದಿನಗಳ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದು ವಿಶೇಷ.