ಸಂಯುಕ್ತ ಹೆಗಡೆ ನಾಯಕಿಯಾಗಿ ನಟಿಸಲಿರುವ ಈ ಚಿತ್ರಕ್ಕೆ ಅಭಿಷೇಕ್ ಬಸಂತ್ ನಿರ್ದೇಶನ.
ಅಗ್ನಿ ಶ್ರೀಧರ್ ಅವರ ಕಾದಂಬರಿ ಆಧಾರಿತ ಚಿತ್ರಗಳು ಕನ್ನಡ ಚಿತ್ರರಸಿಕರ ಮನಗೆದ್ದಿದೆ. ಈಗ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ “ಕ್ರೀಂ” ಚಿತ್ರ ಸದ್ಯದಲ್ಲೇ ಆರಂಭವಾಗಲಿದೆ. ಅಭಿಷೇಕ್ ಬಸಂತ್ ಈ ಚಿತ್ರ ನಿರ್ದೇಶನ ಮಾಡಲಿದ್ದಾರೆ. “ಕಿರಿಕ್ ಪಾರ್ಟಿ” ಖ್ಯಾತಿಯ ಸಂಯುಕ್ತ ಹೆಗಡೆ ನಾಯಕಿಯಾಗಿ ನಟಿಸಲಿದ್ದಾರೆ. ಡಿ.ಕೆ.ದೇವೇಂದ್ರ ನಿರ್ಮಾಣ ಮಾಡುತ್ತಿದ್ದಾರೆ.
ಈ ನೂತನ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು.
ಚಿಕ್ಕಂದಿನಿಂದಲೂ ನನಗೆ ಸಿನಿಮಾ ಬಗ್ಗೆ ಆಸಕ್ತಿ. ನನ್ನ ಮನೆಯವರು ನನ್ನನ್ನು ಹಾಗೆ ಬೆಳೆಸಿದ್ದರು. ಆ ನಂತರ ಎಂ ಬಿ ಎ ಹಾಗೂ ಎಂ ಎಸ್ ಮಾಡಿದೆ. ಈಗ ನನ್ನ ಆಸೆಯಂತೆ ಚಿತ್ರರಂಗದತ್ತ ಬಂದಿದ್ದೀನಿ. ನನ್ನ ಅನುಭವ ಅಂದರೆ ಹೆಡ್ ಬುಷ್ ಚಿತ್ರದಲ್ಲಿ ಅಸೋಸಿಯೇಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಅಗ್ನಿ ಶೀಧರ್ ಸರ್ ಅವರ ಒಡನಾಟದಿಂದ, ಅವರ ಜೊತೆ ಆಡಿರುವ ಮಾತುಗಳಿಂದ ಹೆಚ್ಚಿನ ಅನುಭವ ಪಡಿದಿದ್ದೇನೆ. ನೀನು ನಿರ್ದೇಶನ ಮಾಡು ಎಂದು ಹೇಳಿದ್ದೆ ಅವರು. ಅಗ್ನಿ ಶ್ರೀಧರ್ ಅವರಿಗೆ ನನ್ನ ವಂದನೆಗಳು ಎಂದರು ನಿರ್ದೇಶಕ ಅಭಿಷೇಕ್ ಬಸಂತ್.
ನಾನು ಕಥೆ ಕೇಳಲು ಹೊದಾಗ ತುಂಬಾ ಕುತೂಹಲ ಮನೆಮಾಡಿತ್ತು. ನನ್ನ ಪಾತ್ರದ ಬಗ್ಗೆ ನಾನು ಹೇಳುವುದಕ್ಕಿಂತ ಅಗ್ನಿ ಶ್ರೀಧರ್ ಸರ್ ಹೇಳಿದರೆ ಒಂದು ಕಳೆ. ನಾನು ಈ ಚಿತ್ರದಲ್ಲಿ ಫಿಮೇಲ್ ಹೀರೋ ಅನ್ನಬಹುದು. ಈ ಅವಕಾಶ ನೀಡಿದ್ದಕ್ಕೆ ಅಗ್ನಿ ಶ್ರೀಧರ್ ಸರ್ ಗೆ ಧನ್ಯವಾದ. ನಾನು ಈವರೆಗೂ ಮಾಡಿರದ ಪಾತ್ರ ಅಂತ ಹೇಳಬಹುದು ಎಂದರು ಸಂಯುಕ್ತ ಹೆಗಡೆ.
ನನ್ನ ನಿರ್ಮಾಣದ ಚಿತ್ರಕ್ಕೆ ಅಗ್ನಿ ಶ್ರೀಧರ್ ಅವರು ಕಥೆ ಕೊಟ್ಟಿರುವುದಕ್ಕೆ ಹೆಚ್ಚು ಖುಷಿಯಾಗಿದೆ. ಅವರಿಗೆ ವಿಶೇಷ ಧನ್ಯವಾದ. ಪ್ರೇಕ್ಷಕರಿಗೆ ಕೊಟ್ಟ ದುಡ್ಡಿಗೆ ಮೋಸ ಆಗದಂತಹ ಚಿತ್ರವಿದು. ತೆಲುಗಿನಲ್ಲಿ ಕೆಲವು ಚಿತ್ರ ನಿರ್ಮಾಣ ಮಾಡಿ ಮತ್ತೆ ಈಗ ಕನ್ನಡ ಚಿತ್ರರಂಗಕ್ಕೆ ಮರಳಿ ಬಂದಿದ್ದೀನಿ ಎಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ದೇವೇಂದ್ರ .
ನನ್ನ ಪರಿಚಯಸ್ಥರೊಬ್ಬರ ಮೂಲಕ ದೇವೇಂದ್ರ ಅವರು ನನ್ನನ್ನು ಭೇಟಿಯಾಗಿ ಸಿನಿಮಾ ಮಾಡೋಣ ಅಂತ ಇದ್ದೀನಿ . ನಿಮ್ಮ ಕಥೆ ಬೇಕು ಎಂದರು. ನಾನು ಈಗ ಬೇಡ. ಬೇರೆ ಚಿತ್ರವೊಂದಕ್ಕೆ ಕಥೆ ಬರೆಯುತ್ತಿದ್ದೀನಿ ಅಂದೆ. ಆದರೆ ದೇವೇಂದ್ರ ಅವರು ಮಾತನಾಡುವ ರೀತಿಗೆ ಒಪ್ಪಿಕೊಳ್ಳಲೆ ಬೇಕಾಯಿತು. ನನ್ನ ಹಿಂದಿನ ಕಥೆಗಳಿಗಿಂತ ಇದು ಭಿನ್ನವಾಗಿರಲಿದೆ. ವಾಸ್ತಾವಾಂಶಗಳು ಕಥೆಯಲ್ಲಿ ಹೆಚ್ಚಿರುತ್ತದೆ. ನಿರ್ದೇಶಕ ಅಭಿಷೇಕ್ ನನ್ನು ಹುಟ್ಟಿದ ದಿನದಿಂದ ಬಲ್ಲೆ. ಅವರ ಅಪ್ಪ ಕೂಡ ಪರಿಚಿತರು. ನೀನು ನಟನೆಗಿಂತ ಹಚ್ಚಾಗಿ ನಿರ್ದೇಶಕನಾಗುವುದು ಒಳ್ಳೆಯದು ಅಂತ ಅಭಿಷೇಕ್ ಗೆ ಹೇಳಿದೆ. ಈ ಚಿತ್ರದ ಮೂಲಕ ಆತ ನಿರ್ದೇಶಕನಾಗುತ್ತಿದ್ದಾನೆ. ಮಹಿಳಾ ಪ್ರಧಾನ ಚಿತ್ರವಾಗಿರುವುದರಿಂದ ನಟಿಯರ ಆಯ್ಕೆಯಲ್ಲಿದ್ದಾಗ, ಈ ಪಾತ್ರಕ್ಕೆ ಸಂಯುಕ್ತ ಹೆಗಡೆ ನನಗೆ ಸೂಕ್ತ ಅನಿಸಿದರು. ಸಂಯುಕ್ತ ಹೆಗಡೆ ನನ್ನ ಭೇಟಿಯಾಗಲು ಬಂದಾಗ, ಎದುರು ನಿಂತಿರುವ ನಿರ್ದೇಶಕರೊಡನೆ ಕಿಕ್ ಬಾಕ್ಸಿಂಗ್ ಮಾಡಲು ಹೇಳಿದೆ. ಆಕೆ ತಕ್ಷಣ ಸಿದ್ದವಾದರು. ನಾನು ಅವರು ಯಾರನಾದರೂ ಕಳುಹಿಸಿ ಕೊಡಿ ಕಲಿಯುತ್ತೇನೆ ಅಂತ ಹೇಳಬಹುದು ಅಂದುಕೊಂಡೆ. ಆದರೆ ಅವರು ತಕ್ಷಣ ಸಿದ್ದವಾದರು. ಆಗ ಈ ಪಾತ್ರಕ್ಕೆ ನನ್ನ ಆಯ್ಕೆ ಸರಿ ಎನಿಸಿತು. ಅರುಣ್ ಸಾಗರ್ ಸಹ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಏಪ್ರಿಲ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಆಗಸ್ಟ್ -ಸೆಪ್ಟೆಂಬರ್ ವೇಳೆಗೆ ಚಿತ್ರ ತೆರೆಗೆ ಬರಲಿದೆ. “ಕ್ರೀಂ” ಎಂದರೆ ಸಂಸ್ಕೃತದಲ್ಲಿ ಬರುವ ದೇವಿಯ ಕುರಿತಾದ ಮಂತ್ರ. ಈ ಸದ್ಯಕ್ಕೆ ಚಿತ್ರದ ಬಗ್ಗೆ ಇಷ್ಟು ಮಾಹಿತಿ ನೀಡಬಹುದು ಎಂದರು ಅಗ್ನಿ ಶ್ರೀಧರ್.
ರೋಶನ್ ಅವರ ಬಳಿ ನನ್ನ ಮಗ ಕಿಕ್ ಬಾಕ್ಸಿಂಗ್ ಗೆ ಹೋಗುತ್ತಾನೆ. ಅವರ ಬಳಿ ನಾನು ಹೇಳುತ್ತಿದ್ದೆ. ಒಂದು ಸಲ ನಾನು ಅಗ್ನಿ ಶ್ರೀಧರ್ ಅವರನ್ನು ಭೇಟಿಯಾಗಬೇಕು ಅಂತ. ಆದರೆ ಇತ್ತೀಚೆಗೆ ರೋಶನ್ ಅವರು ಫೋನ್ ಮಾಡಿ ಆಫೀಸಿಗೆ ಬನ್ನಿ ಅಂದರು. ಅಲ್ಲಿ ಶ್ರೀಧರ್ ಅವರನ್ನು ಭೇಟಿ ಮಾಡಿದೆ. ಸಾಕಷ್ಟು ಮಾತನಾಡಿದೆ. ಅವರು ಆಳದ ಹಾಗೂ ಆಳುವ ಮನುಷ್ಯ . ಅವರ ಎಲ್ಲಾ ಕಥೆಗಳು ಚೆನ್ನಾಗಿದೆ. ಈ ಸಿನಿಮಾ ಕೂಡ ಉತ್ತಮವಾಗಿ ಮೂಡುಬರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು ಚಿತ್ರದಲ್ಲಿ ಅಭಿನಯಿಸುತ್ತಿರುವ ಅರುಣ್ ಸಾಗರ್.
ಈ ಚಿತ್ರದಲ್ಲಿ ರೋಶನ್ ಅವರು ಸಹ ಅಭಿನಯಿಸುತ್ತಿದ್ದಾರೆ.ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದ್ದ ಕೆ.ಮಂಜು ಅವರು ಚಿತ್ರತಂಡಕ್ಕೆ ಶುಭಕೋರಿದರು. ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾದರು. ಸಂವರ್ಧಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಡಿ.ಕೆ.ದೇವೇಂದ್ರ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಭಿಷೇಕ್ ಬಸಂತ್ ನಿರ್ದೇಶಿಸುತ್ತಿದ್ದಾರೆ. ಸುನೋಜ್ ವೇಲಾಯುಧನ್ ಛಾಯಾಗ್ರಹಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.