`ಫ್ಯಾಮಿಲಿ ಪ್ಯಾಕ್’ ಮೆಚ್ಚಿದ ಪ್ರೇಕ್ಷಕ; ಸಕ್ಸಸ್ ಮೀಟ್ ಮಾಡಿದ ಚಿತ್ರತಂಡ
ಪಿಆರ್ಕೆ ಪ್ರೊಡಕ್ಷನ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಫ್ಯಾಮಿಲಿ ಪ್ಯಾಕ್ ಚಿತ್ರಕ್ಕೆ ಓಟಿಟಿಯಲ್ಲಿ ಒಳ್ಳೇ ಪ್ರತಿಕ್ರಿಯೆ ಸಿಕ್ಕಿದೆ. ಆ ಖುಷಿಯನ್ನು ಹಂಚಿಕೊಳ್ಳಲೆಂದೇ ಚಿತ್ರತಂಡ ಒಂದೆಡೆ ಸೇರಿತ್ತು. ಪುನೀತ್ ಅವರ ಅನುಪಸ್ಥಿತಿಯನ್ನು ಹೇಳಿಕೊಳ್ಳುತ್ತಲೇ ಒಬ್ಬೊಬ್ಬರೇ ಮಾತು ಆರಂಭಿಸಿದರು.
ಚಿತ್ರದ ನಿರ್ದೇಶಕ ಅರ್ಜುನ್ ಕುಮಾರ್ ಮಾತನಾಡಿ, ಈ ಸಂದರ್ಭದಲ್ಲಿ ಪುನೀತ್ ಅವರನ್ನು ನಾವು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಪೂರ್ತಿ ಸಿನಿಮಾ ನೋಡದಿದ್ದರೂ, ಡಬ್ಬಿಂಗ್ ವರ್ಷನ್ ನೋಡಿ ಖುಷಿಪಟ್ಟಿದ್ದರು. ಪೂರ್ಣ ಪ್ರಮಾಣದ ಸಿನಿಮಾ ನೋಡುವ ಮುಂಚೆಯೇ ಹೊರಟು ಹೋದರು. ಇನ್ನು ಚಿತ್ರಕ್ಕೆ ವೀಕ್ಷಕಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸ್ಕ್ರೀಮಿಂಗ್ ಎಷ್ಟು ಗಂಟೆ ಎಂಬ ವಿಚಾರ ಮೂರು ವಾರದ ಬಳಿಕ ಗೊತ್ತಾಗಲಿದೆ. ಭಾರತದಲ್ಲಿ ನಮ್ಮ ಸಿನಿಮಾ ಟ್ರೆಂಡಿಂಗ್ನಲ್ಲಿ ಏಳನೇ ಸ್ಥಾನ ಪಡೆದಿತ್ತು. ಇದರ ಜತೆಗೆ ತೆಲುಗಿನಿಂದಲೂ ಸಿನಿಮಾ ಮಾತುಕತೆಗಳು ನಡೆಯುತ್ತಿವೆ. ಶೀಘ್ರದಲ್ಲಿಯೇ ಆ ಬಗ್ಗೆ ತಿಳಿಸಲಿದ್ದೇನೆ ಎಂಬುದು ನಿರ್ದೇಶಕರ ಮಾತು.
ಇನ್ನು ಚಿತ್ರದ ನಾಯಕ ಲಿಖಿತ್ ಶೆಟ್ಟಿ ಸಹ ಖುಷಿಯಲ್ಲಿದ್ದಾರೆ. ಸಂಕಷ್ಟಕರ ಗಣಪತಿ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಅದಾದ ಬಳಿಕ ಓಟಿಟಿಯಲ್ಲಿ ತೆರೆಗೆ ಬಂದಿತ್ತು. ಅಲ್ಲಿ ಆ ಸಿನಿಮಾಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿದ್ದೆ. ಇದೀಗ ನನ್ನ ಎರಡನೇ ಸಿನಿಮಾ ಫ್ಯಾಮಿಲಿ ಪ್ಯಾಕ್ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಿ, ಎಲ್ಲ ಕಡೆಯಿಂದಲೂ ಮೆಚ್ಚುಗೆ ಪಡೆದಿದೆ. ಸಿನಿಮಾ ಶುರುವಾದಾಗ ಇದು ಥಿಯೇಟರ್ ಸಿನಿಮಾ ಎಂದು ಅಪ್ಪು ಅವರು ಹೇಳಿದ್ದರು. ಆದರೆ, ಅದೇ ಸಮಯದಲ್ಲಿ ಪ್ಯಾಂಡಮಿಕ್ ಬಂತು. ಹಾಗಾಗಿ ಒಟಿಟಿಗೆ ಸಿನಿಮಾ ಸೇಲ್ ಆಯ್ತು. ಹಾಕಿದ ಬಂಡವಾಳದ ಎರಡು ಪಟ್ಟು ಆದಾಯ ಸಿಕ್ಕಿದೆ. ಸ್ಯಾಟ್ಲೈಟ್ ಹಕ್ಕು ಮಾರಾಟಕ್ಕೂ ಮಾತುಕತೆಗಳು ನಡೆಯುತ್ತಿವೆ ಎನ್ನುತ್ತಾರೆ ಲಿಖಿತ್.
ಚಿತ್ರದಲ್ಲಿ ನಟಿಸಿರುವ ಸಿಹಿಕಹಿ ಚಂದ್ರು ಸಹ ಮಾತನಾಡಿದರು. ನೇರವಾಗಿ ಒಟಿಟಿಯಲ್ಲಿ ಸಿನಿಮಾ ಬರುತ್ತೆ ಎಂದಾಗ ಆತಂಕ ಜಾಸ್ತಿ ಇರುತ್ತದೆ. ಆರಂಭದಲ್ಲಿ ನಮಗೂ ಆ ಆತಂಕ ಇತ್ತು. ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಅಳುಕಿತ್ತು. ಆದರೆ, ನಮ್ಮ ಈ ಸಿನಿಮಾವನ್ನು ಜನ ನೋಡಿ ಮೆಚ್ಚಿದ್ದಾರೆ. ಎಲ್ಲ ವರ್ಗದ ಜನ ಇದನ್ನು ನೋಡುತ್ತಿದ್ದಾರೆ ಎಂದರೆ ಖುಷಿಯ ಜನ. ಟ್ರೆಂಡ್ ಚೇಂಜ್ ಆಗ್ತಿದೆ. ಈ ಹೊಸ ಬೆಳವಣಿಗೆಗೆ ನಾವೂ ಒಗ್ಗಿಹೊಳ್ಳಬೇಕಿದೆ. ಇಡೀ ಫ್ಯಾಮಿಲಿ ಕುಳಿತು ನೋಡುವ ಸಿನಿಮಾ ಎಂದರು. ಚಿತ್ರದಲ್ಲಿ ಶರ್ಮಿತಾ ಗೌಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಹೊಸ ರೀತಿಯ ಪಾತ್ರ ಕೊಟ್ಟ ನಿರ್ದೇಶಕರಿಗೆ ಮತ್ತು ಪಿಆರ್ಕೆ ಪ್ರೊಡಕ್ಷನ್ಸ್ಗೆ ಧನ್ಯವಾದ ಅರ್ಪಿಸಿದರು. ಗುರುಕಿರಣ್ ಸಂಗೀತ, ಉದಯ್ ಲೀಲಾ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ ಬರೆದಿದ್ದಾರೆ.