‘ಕಿರಿಕ್ ಪಾರ್ಟಿ’ ಚಿತ್ರದ ಬಬ್ಲಿ ಹುಡುಗಿಯಾಗಿ ಚಿತ್ರರಂಗಕ್ಕೆ ಬಂದ ನಟಿ ಸಂಯುಕ್ತಾ ಹೆಗ್ಡೆ. ತಮಿಳು, ತೆಲುಗು, ಹಿಂದಿ ಚಿತ್ರರಂಗಕ್ಕೆ ಹೋಗಿ ಬಂದರೂ ಆಕೆಗೆ ಮತ್ತೆ ಒಳ್ಳೆ ಬ್ರೇಕ್ ಮಾತ್ರ ಸಿಗಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಆಕ್ವೀಟ್ ಆಗಿರುವ ಚೆಲುವೆ ಹಾಟ್ ಫೋಟೊಶೂಟ್‌ಗಳಿಂದ ಸದ್ದು ಮಾಡ್ತಿರ್ತಾರೆ. ಇದೀಗ ನಟಿ ‘ಕ್ರೀಂ’ ಚಿತ್ರದಲ್ಲಿ ಚಾಲೆಂಜಿಂಗ್ ರೋಲ್ ಪ್ಲೇ ಮಾಡ್ತಿದ್ದಾರೆ. ಅಗ್ನಿ ಶ್ರೀಧರ್ ‘ಕ್ರೀಂ’ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಅಭಿಷೇಕ್ ಬಸಂತ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದ್ದು ಈಗಾಗಲೇ ಶೂಟಿಂಗ್ ಕಂಪ್ಲೀಟ್ ಆಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿರುವ ತಂಡ ಸುದ್ದಿಗೋಷ್ಠಿ ನಡೆಸಿ ಸಿನಿಮಾ ಬಗ್ಗೆ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ದೇವೇಂದ್ರ ಡಿ. ಕೆ ಬಂಡವಾಳ ಹೂಡಿದ್ದು ಬೆಂಗಳೂರಿನ ಸುತ್ತಾಮುತ್ತಾ ಸಿನಿಮಾ ಚಿತ್ರೀಕರಣ ನಡೆದಿದೆ.
ಸಂಯುಕ್ತಾ ಹೆಗ್ಡೆ ಈವರೆಗೆ ಕನ್ನಡದಲ್ಲಿ ನಾಲ್ಕೈದು ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಅವರಿಗೆ ಜಂಭ ಜಾಸ್ತಿ, ಬಹಳ ಕಿರಿಕ್ ಮಾಡ್ತಾರೋ ಅನ್ನೋ ಮಾತುಗಳು ಪದೇ ಪದೇ ಕೇಳಿ ಬರುತ್ತದೆ. ಆದರೆ ‘ಕ್ರೀಂ’ ಚಿತ್ರದ ನಿರ್ದೇಶಕರು, ನಿರ್ಮಾಪಕರು ಮಾತ್ರ ಸುಳ್ಳು, ಆಕೆ ಬಹಳ ಕಷ್ಟಪಟ್ಟು ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ, ಕಾಲಿಗೆ ಪೆಟ್ಟಾದರೂ ಕೂಡ ಪಟ್ಟು ಬಿಡದೇ ನಟಿಸಿದ್ದಾರೆ ಎಂದು ಹೇಳಿದ್ದಾರೆ. ಅಂದಹಾಗೆ ‘ಕ್ರೀಂ’ ಚಿತ್ರದಲ್ಲಿ ಸಂಯುಕ್ತಾ ಬೀದಿ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಬಹಳ ನೈಜವಾಗಿ ಸಿನಿಮಾವನ್ನು ಸೆರೆಹಿಡಿದಿದೆಯಂತೆ ಚಿತ್ರತಂಡ.
“ಹೆಣ್ಣು ನರಬಲಿಯ ಸುತ್ತಾ ‘ಕ್ರೀಂ’ ಸಿನಿಮಾ ಕಥೆ ಸಾಗುತ್ತದೆ. ಅದರ ಹಿಂದೆ ಯಾರೆಲ್ಲಾ ಇದ್ದಾರೆ. ಏನೆಲ್ಲಾ ನಡೆಯುತ್ತೆ ಅನ್ನೋದನ್ನು ಸಿನಿಮಾದಲ್ಲಿ ಹೇಳಿದ್ದೇವೆ. ಸಾಕಷ್ಟು ವಿಚಾರಗಳನ್ನು ಚಿತ್ರದಲ್ಲಿ ಹೇಳಿದ್ದೇವೆ. ನಾವು ಏನು ಹೇಳಿದ್ದೇವೆ ಅನ್ನೋದು ಸಿನಿಮಾ ನೋಡಿದರೆ ಗೊತ್ತಾಗುತ್ತದೆ. ಏನು ಹೇಳಿಲ್ಲ ಅನ್ನುವುದು ಕೂಡ ಸಿನಿಮಾ ಅರ್ಥವಾಗುತ್ತದೆ” ಎಂದು ಅಗ್ನಿ ಶ್ರೀಧರ್ ವಿವರಿಸಿದ್ದಾರೆ.
ನಟಿ ಸಂಯುಕ್ತಾ ಸಿನಿಮಾ ಬಗ್ಗೆ ಮಾತನಾಡಿ “ಇದು ನನ್ನ ಬಹಳ ಇಷ್ಟದ ಪ್ರಾಜೆಕ್ಟ್. ಎಲ್ಲಾ ಚಿತ್ರಕ್ಕೂ ನಾನು 100% ಕಷ್ಟಬಿದ್ದು ಕೆಲಸ ಮಾಡಿದ್ದೇನೆ. ಈ ಚಿತ್ರಕ್ಕೆ 200% ರಷ್ಟು ಕಷ್ಟ ಬಿದ್ದಿದ್ದೇನೆ. ಕಾಲಿಗೆ ಪೆಟ್ಟಾದಾಗ 2 ತಿಂಗಳು ರೆಸ್ಟ್ ಮಾಡುವಂತಾಯಿತು. ಅಷ್ಟು ದಿನ ನಾನು ಎಂದು ಸುಮ್ಮನೆ ಕೂತವಳಲ್ಲ. ದಿನ ಫಿಸಿಯೋ ಥೆರಪಿ ಮಾಡಬೇಕಿತ್ತು. ಈ ವೇಳೆ ನೋವಿಗೆ ಸಾಕಷ್ಟು ಅತ್ತಿದ್ದೇನೆ. ಆ ನೋವು ತಡೆದುಕೊಂಡು ಚೇತರಿಸಿಕೊಂಡು ಈ ಸಿನಿಮಾದಲ್ಲಿ ನಟಿಸಿದೆ.” “ಶ್ರೀಮುರಳಿ ಸರ್‌ಗೂ ಇಂತದ್ದೇ ಪೆಟ್ಟಾಗಿದೆ. ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದೇನೆ. ಇಲ್ಲಿವರೆಗೆ ಕಾಲೇಜು ಹುಡುಗಿ, ಬಬ್ಲಿ ಹುಡುಗಿ ಪಾತ್ರಗಳನ್ನು ಮಾಡಿದ್ದೇನೆ. ಇದೇ ಮೊದಲ ಬಾರಿಗೆ ಬಹಳ ಗಂಭೀರವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನಗೂ ಆರಂಭದಲ್ಲಿ ಈ ಬಗ್ಗೆ ಭರವಸೆ ಇರಲಿಲ್ಲ. ನಾನು ಬಹಳ ದಿನಗಳಿಂದ ಇಂತಹ ಚಿತ್ರಕ್ಕಾಗಿ ಕಾಯುತ್ತಿದ್ದೆ. ನನ್ನನ್ನು ಹೊಸ ಅವತಾರದಲ್ಲಿ ನೋಡುತ್ತೀರಾ. ಬಹಳ ಇಷ್ಟಪಟ್ಟು, ಕಷ್ಟಪಟ್ಟು ಈ ಸಿನಿಮಾ ಮಾಡಿದ್ದೇನೆ. ಈ ಅವಕಾಶ ಕೊಟ್ಟ ತಂಡಕ್ಕೆ ಧನ್ಯವಾದಗಳು” ಎಂದು ಹೇಳಿದ್ದಾರೆ.