ಹೆಂಡತಿ ಮೇಲಿನ ಅತಿಯಾದ ಪೊಸೆಸಿವ್ನೆಸ್ ಜಯಂತನನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಭದ್ರಕೋಟೆಯಲ್ಲಿ ಜಾಹ್ನವಿಯನ್ನು ಲಾಕ್ ಮಾಡಿ ಬಂಧಿಸಿರುವ ಜಯಂತ್, ಆಕೆಯ ಮೇಲೆ ಹದ್ದಿನ ಕಣ್ಣಿಟ್ಟಿದ್ದಾನೆ. ಮನೆಯಲ್ಲಿನ ಆಕೆಯ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾನೆ. ಮನೆಯಿಂದಾಚೆ ಎಲ್ಲೂ ಆಕೆಯನ್ನು ಅಪ್ಪಿ ತಪ್ಪಿಯೂ ಕರೆದೊಯ್ಯುತ್ತಿಲ್ಲ.
ಜಾಹ್ನವಿಗೆ ಈಗ ಕಾಲೇಜಿನಲ್ಲಿ ಪರೀಕ್ಷೆಗಳು ಶುರುವಾಗಿವೆ. ತವರು ಮನೆಯಿಂದ ಆಕೆಗೆ ಕಾಲೇಜು ಹತ್ತಿರ. ಗಂಡನ ಮನೆಯಿಂದ ತುಂಬ ದೂರ. ಈ ಕಾರಣಕ್ಕೆ ಸಮಯ ಸಿಕ್ಕಾಗಲೆಲ್ಲ ಮನೆಯಲ್ಲಿ ಓದು ಆರಂಭಿಸಿದ್ದಾಳೆ. ಪರೀಕ್ಷೆಯನ್ನು ತನ್ನ ಮನೆಗೆ ಹೋಗಿ ಅಲ್ಲಿಂದ ಕಾಲೇಜಿಗೆ ಓಡಾಡಿ ಬರೆಯುವ ಪ್ಲಾನ್ ಮಾಡಿದ್ದಾಳೆ.
ಈ ನಡುವೆ ಪತಿ ಆಫೀಸ್ಗೆ ಹೊರಡುವುದಕ್ಕೂ ಮುನ್ನ ತನ್ನ ಬ್ಯಾಗ್ ಪ್ಯಾಕ್ ಮಾಡಿಕೊಳ್ಳುತ್ತಿದ್ದಾಳೆ. ಅಚ್ಚರಿಯ ರೀತಿಯಲ್ಲಿ ಪತಿಯ ಆಗಮನವಾಗಿದೆ. ಯಾಕೆ ಬ್ಯಾಗ್ ಪ್ಯಾಕ್ ಮಾಡ್ತಿದ್ದೀರಿ? ಎಂದು ಜಾಹ್ನವಿಗೆ ಕೇಳಿದ್ದಾನೆ ಜಯಂತ್. ಅರೇ ಈಗ ಪರೀಕ್ಷೆ ಶುರುವಾಯ್ತು. ಅದಕ್ಕಾಗಿ ಅಮ್ಮನ ಮನೆಗೆ ಹೋಗಿ ಅಲ್ಲಿಂದಲೇ ಕಾಲೇಜಿಗೆ ಪರೀಕ್ಷೆಗೆ ಹೋಗ್ತಿನಿ ಎಂದಿದ್ದಾಳೆ.
ಪತ್ನಿಯ ಮಾತು ಕೇಳಿ ಕೊಂಚ ಕುಪಿತನಾಗಿದ್ದಾನೆ. ಜೋರು ಧ್ವನಿಯಲ್ಲಿ ಮಾತನಾಡಿದ್ದಾನೆ. ಬಳಿಕ ನಿಮ್ಮಿಷ್ಟ ನಿಮಗನಿಸಿದ್ದನ್ನು ಮಾಡಿ. ನನ್ನನ್ನು ಬಿಟ್ಟು ಇರಲು ನಿಮಗೆ ಆಗುತ್ತೆ, ನನಗಾಗಲ್ಲ ಎಂದು ಹೇಳಿ ಆಫೀಸ್ ಕಡೆ ನಡೆದಿದ್ದಾನೆ. ಇತ್ತ ಪತಿಯ ಮಾತು ಜಾಹ್ನವಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಏನು ಮಾಡಲಿ ಎಂದು ಚಿಂತಿಸುತ್ತ ಕೂತಿದ್ದಾಳೆ. ಇತ್ತ ಪತ್ನಿ ತವರು ಮನೆಗೆ ಹೊರಟ ವಿಚಾರವನ್ನೇ ತಲೆಗೆ ತುಂಬಿಕೊಂಡು ಆಫೀಸ್ಗೆ ಬಂದ ಜಯಂತ್ಗೆ ಅವನ ಆತ್ಮಸಾಕ್ಷಿಗಳೇ ಅಣಕ ಮಾಡುತ್ತಿವೆ.
ಒಬ್ಬ ಜಯಂತನಿಗೆ ಅವನದೇ ಆದ ನಾಲ್ಕು ಆತ್ಮಸಾಕ್ಷಿಗಳು ಪ್ರಶ್ನೆ ಮಾಡುತ್ತಿವೆ. ಅಷ್ಟು ಸುಲಭಕ್ಕೆ ಜಾಹ್ನವಿಯನ್ನು ಅವಳ ಮನೆಗೆ ಕಳಿಸಿಕೊಡ್ತಿಯಾ? ಅವಳಿಗೆ ನಿನ್ನ ಮೇಲೆ ಪ್ರೀತಿ ಇಲ್ಲ, ಅದಕ್ಕಾಗಿಯೇ ಅವಳು ಹೋಗ್ತಿದ್ದಾಳೆ. ನಿನ್ನ ಹೆಂಡತಿಯನ್ನು ತವರಿಗೆ ಹೋಗೋದನ್ನ ತಡಿಯಲಾಗಲಿಲ್ಲ ನಿನ್ನ ಕೈಯಲ್ಲಿ. ಇದರರ್ಥ ಅವಳಿಗೆ ನಿನ್ನ ಮೇಲೆ ನಯಾ ಪೈಸೆಯೂ ಪ್ರೀತಿ ಇಲ್ಲ ಅಂತರ್ಥ ಎಂದು ಟೀಕಿಸುತ್ತಿವೆ.
ಬಳಿಕ ಫೋನ್ ಕೈಯಲ್ಲಿ ಹಿಡಿದು ಪತ್ನಿಗೆ ಫೋನ್ ಮಾಡಿದ್ದಾನೆ. ಅತ್ತ ಕಡೆಯಿಂದ ರೀ ನಾನು ನಿಮ್ಮನ್ನ ಬಿಟ್ಟು ಎಲ್ಲೂ ಹೋಗಲ್ಲ. ನೀವಿಲ್ಲದೆ ನನಗೂ ಇರೋಕೆ ಆಗಲ್ಲ ಎಂದಿದ್ದಾಳೆ. ಇದನ್ನು ಕೇಳಿ ಜಯಂತ್ ಖುಷಿಯಾಗಿದ್ದಾನೆ.