ಅಪ್ಪಟ ಕನ್ನಡ ನೆಲ, ಸಂಸ್ಕೃತಿ, ಭಾಷೆಯ ಚಲನಚಿತ್ರ ಕಾಂತಾರ ಸಿನಿಮಾ ಬಿಡುಗಡೆಯಾಗಿ ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿಯವರು ಕಥೆ ಬರೆದು ಸಿನಿಮಾ ತೆಗೆದಿರುವ ರೀತಿ, ಅವರ ನಟನೆಯನ್ನು ದಿಗ್ಗಜ ನಟರು ಹಾಡಿಹೊಗಳುತ್ತಿದ್ದಾರೆ.
ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ಸಹ ದೀಪಾವಳಿ ಹಬ್ಬದ ಮಧ್ಯೆ ಚಿತ್ರ ವೀಕ್ಷಿಸಿ ರಿಷಬ್ ಶೆಟ್ಟಿಯನ್ನು ಮನಸಾರೆ ಹೊಗಳಿ ಹಾರೈಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಗೊತ್ತಿರುವುದಕ್ಕಿಂತ ಗೊತ್ತಿಲ್ಲದಿರುವುದೇ ಹೆಚ್ಚು ಎಂಬುದನ್ನು ಸಿನಿಮಾದಲ್ಲಿ ಇಷ್ಟು ಚೆನ್ನಾಗಿ ಇದುವರೆಗೆ ಯಾರೂ ತೋರಿಸಿರಲಾರರು, ಹೇಳಿರಲಾರರು, ಹೊಂಬಾಳೆ ಫಿಲ್ಮ್ಸ್ ನಡಿ ಮೂಡಿಬಂದ ಕಾಂತಾರ ಚಿತ್ರ ನೋಡಿ ನನ್ನ ಮೈನವಿರೇಳಿತು.
ಬರಹಗಾರನಾಗಿ, ನಿರ್ದೇಶಕನಾಗಿ ಮತ್ತು ನಟನಾಗಿ ರಿಷಬ್ ಶೆಟ್ಟಿಯವರೇ ನಿಮಗೆ ಹ್ಯಾಟ್ಸ್ ಆಫ್. ಭಾರತೀಯ ಚಿತ್ರರಂಗದ ಮೇರುಚಿತ್ರವಾಗಿರುವ ಇದರ ಭಾಗವಾಗಿರುವ ಎಲ್ಲಾ ನಟರು ಮತ್ತು ಇಡೀ ತಂಡಕ್ಕೆ ಅಭಿನಂದನೆಗಳು ಎಂದು ಹೇಳಿದ್ದಾರೆ.