ನಟ ಸುದೀಪ್ ರಾಜಕೀಯರಂಗ ಸೇರುತ್ತಾರೆ ಎನ್ನುವ ಗುಸುಗುಸು ಕೆಲ ದಿನಗಳ ಹಿಂದೆ ಕೇಳಿಬಂದಿತ್ತು. ಅದರ ಬೆನ್ನಲ್ಲೇ ಸುದೀಪ್ ಖಾಸಗಿ ವಿಡಿಯೋ ಲೀಕ್ ಬೆದರಿಕೆ ಪತ್ರಗಳು ಮನೆಗೆ ಬಂದಿತ್ತು. ಈ ಸಂಬಂಧ ಸುದೀಪ್ ಮ್ಯಾನೇಜರ್, ಆಪ್ತ ಜಾಕ್ ಮಂಜು ದೂರು ದಾಖಲಿಸಿದ್ದರು. 20 ದಿನಗಳು ಕಳೆದರೂ ಬೆದರಿಕೆ ಪತ್ರ ಕಳುಹಿಸಿದವರ ಸುಳಿವು ಮಾತ್ರ ಸಿಕ್ಕಿಲ್ಲ. ಬೆದರಿಕೆ ಪತ್ರದಲ್ಲಿ ಸುದೀಪ್ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಕಿಡಿಗೇಡಿಗಳು ಉಲ್ಲೇಖಿಸಿದ್ದರು. ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು. ಜಾಕ್ ಮಂಜು ನೀಡಿದ ದೂರಿನ ಅನ್ವಯ ಐಪಿಸಿ ಸೆನ್ಷನ್ 504(ಶಾಂತಿಭಂಗ), 506(ಜೀವ ಬೆದರಿಕೆ) ಹಾಗೂ ಐಟಿ ಆಕ್ಟ್ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಕಿಚ್ಚ ಸುದೀಪ್ ಈ ಬಗ್ಗೆ ಪ್ರತಿಕ್ರಿಯಿಸಿ ಚಿತ್ರರಂಗದವರೇ ಇದರ ಹಿಂದೆ ಇದ್ದಾರೆ, ಅವರಿಗೆ ಕಾನೂನಿನ ಮೂಲಕವೇ ಉತ್ತರ ಕೊಡುತ್ತೇನೆ ಎಂದಿದ್ದರು. ಸುದೀಪ್ ಅವರಿಗೆ 2 ಬೆದರಿಕೆ ಪತ್ರಗಳು ಬಂದಿತ್ತಂತೆ. ಮೊದಲ ಪತ್ರಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳದಿದ್ದಾಗ ಕಿಡಿಗೇಡಿಗಳು ಮತ್ತೊಂದು ಪತ್ರ ಕಳುಹಿಸಿದ್ದಾರೆ.
ಈ ಹಿಂದೆ ಇದ್ದ ಸುದೀಪ್ ಮನೆಯ ಕಾರು ಚಾಲಕನ ಮೇಲೆ ಪೊಲೀಸರಿಗೆ ಅನುಮಾನ ಇತ್ತು. ಇದೀಗ ಆತನನ್ನು ಸಿಸಿಬಿ ಪೋಲಿಸರು ವಿಚಾರಣೆ ನಡೆಸಿದ್ದಾರೆ. ಎರಡು ಬಾರಿ ಆತನಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ. ಆದರೆ ಕೃತ್ಯಕ್ಕೆ ಸಂಬಂಧಿಸಿದಂತೆ ಆತನಿಂದ ಪೊಲೀಸರಿಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. 3 ವರ್ಷಗಳ ಹಿಂದೆ ಆತ ಕೆಲಸ ಬಿಟ್ಟಿದ್ದಾಗಿ ತಿಳಿಸಿದ್ದಾನೆ. ಜಾಕ್ ಮಂಜು ಕೂಡ ಈ ಕಾರು ಚಾಲಕನ ಮೇಲೆಯೇ ಶಂಕೆ ವ್ಯಕ್ತಪಡಿಸಿದ್ದರು.
ಇನ್ನು ದೊಮ್ಮಲೂರಿನ ಪೋಸ್ಟ್ ಆಫೀಸ್‌ಗೆ ಸ್ವಿಫ್ಟ್ ಕಾರಿನಲ್ಲಿ ಬಂದು ಪತ್ರಗಳನ್ನು ಪೋಸ್ಟ್ ಮಾಡಿರೋದು ಸಿಸಿಬಿ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಪೊಲೀಸರು ಆ ಕಾರಿನ ಜಾಡು ಹಿಡಿದು ಹೊರಟಿದ್ದರು. ಸಿಸಿಟಿವಿಯಲ್ಲಿ ಯಾವುದೇ ಗುರುತು ಸಿಗದಂತೆ ಬಂದು ಪತ್ರ ಪೋಸ್ಟ್ ಮಾಡಿ ದುಷ್ಕಮಿ ಹೋಗಿದ್ದ. ಇನ್ನು ಇದಕ್ಕಾಗಿ ನಕಲಿ ನಂಬರ್ ಪ್ಲೇಟ್ ಇರುವ ಕಾರನ್ನು ಕಿಡಿಗೇಡಿಗಳು ಈ ಕೃತ್ಯಕ್ಕೆ ಬಳಸಿರುವುದು ಗೊತ್ತಾಗಿದೆ. ಕೆಂಗೇರಿಯ ಬಳಿಯ ವ್ಯಕ್ತಿಯೊಬ್ಬರ ಕಾರನ್ನು ದುಷ್ಕರ್ಮಿಗಳು ಈ ಕೃತ್ಯಕ್ಕೆ ಬಳಸಿರುವುದು ಗೊತ್ತಾಗಿದೆ. ಆದರೆ ಆ ವ್ಯಕ್ತಿ ತನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾಗಿ ವರದಿ ಆಗಿತ್ತು.